ADVERTISEMENT

ಡಿಎಫ್‌ಒ ವರದಿ ತಿರಸ್ಕರಿಸಿದ ಅರಣ್ಯ ಸಂರಕ್ಷಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 5:35 IST
Last Updated 17 ಜನವರಿ 2012, 5:35 IST

ಸಕಲೇಶಪುರ: ತಾಲ್ಲೂಕಿನ ಪಶ್ಚಿಮ ಘಟ್ಟದ ಕೆಂಚನಕುಮರಿ ಹಾಗೂ ಕಾಗಿನೆರೆ ಮೀಸಲು ಅರಣ್ಯದೊಳಗೆ  ಜಲವಿದ್ಯುತ್ ಯೋಜನೆ ಕಾಮಗಾರಿ ಯಲ್ಲಿ, ಮಾರುತಿ ಪವರ್ ಜೆನ್ (ಇಂಡಿಯಾ) ಪ್ರೈ ಲಿ. ಸಂಸ್ಥೆ ಅರಣ್ಯ ಸಂರಕ್ಷಣಾ ಕಾಯಿದೆ 1980 ರ ಸಂಪೂರ್ಣ ಉಲ್ಲಂಘನೆ ಮಾಡಿರುವು ದರಿಂದ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆ 1963 ಸೆಕ್ಷನ್ 82 ರೂಲ್ ನಂ.69 ಪ್ರಕಾರ ಯೋಜನೆ ಗುತ್ತಿಗೆ ರದ್ದುಪಡಿಸಲು ಡಿಎಫ್‌ಒ ನೀಡಿರುವ ಶಿಫಾರಸು ಅನ್ನು ಅರಣ್ಯ ಸಂರಕ್ಷಣಾಧಿ ಕಾರಿ ತಿರಸ್ಕರಿಸಿರುವುದು ಬೆಳಕಿಗೆ ಬಂದಿದೆ.

ಇಂತಹ ಬೃಹತ್ ಯೋಜನೆ ಮೀಸಲು ಅರಣ್ಯದಲ್ಲಿ ಅನುಷ್ಟಾನ ಗೊಳಿಸುವ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅವರ ಅಧೀನಾಧಿಕಾರಿಗಳು ಎಚ್ಚರಿಕೆಯಿಂದ ಗಮನಿಸಬೇಕಾಗಿತ್ತು. ಅಧೀನಾಧಿ ಕಾರಿಗಳು ಸಂಸ್ಥೆಯಿಂದ ವಿಧಿಸಿದ ಷರತ್ತುಗಳು ಪಾಲಿಸದೆ ಎಸಗಿದ ಅಕ್ರಮಗಳನ್ನು ತಡೆಗಟ್ಟಲು ಇದುವರೆಗೆ ಯಾವುದೇ ಕಾನೂನು ಕ್ರಮ ಏಕೆ ಕೈಗೊಂಡಿಲ್ಲ.
 
ಯೋಜನಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದ ಕೂಡಲೇ ತಡೆ ಹಿಡಿಯುವ ಕಾರ್ಯ ಮಾಡದೆ. ಯೋಜನೆಯ ಗುತ್ತಿಗೆಯನ್ನು ಏಕಾಏಕಿ ರದ್ದು ಪಡಿಸಲು ಶಿಫಾರಸು ಮಾಡಿರುವ ಪ್ರಸ್ತಾವವನ್ನು ಮತ್ತೊಮ್ಮೆ ವಿವರವಾಗಿ ಪರಿಶೀಲಿಸಿ ವರದಿ ನೀಡಬೇಕು. ಮಾರುತಿ ಪವರ್ ಜೆನ್ ಸಂಸ್ಥೆಯವರಿಗೂ ಸ್ಪಷ್ಟನೆ ನೀಡಲು ಸೂಚಿಸಲಾಗಿದ್ದು, ವರದಿ ಬಂದ ನಂತರ ಮೇಲಿನ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಅವರು ಜನವರಿ  7ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ  ಬರೆದಿ ರುವ ಪತ್ರದಲ್ಲಿ ತಿಳಿಸಿದ್ದಾರೆ.

ಡಿಎಫ್‌ಒ ನಿರ್ಲಕ್ಷ್ಯ: ಜೆನ್ ಕಂಪೆನಿಯು ಕೆಂಚನಕುಮರಿ ಹಾಗೂ ಕಾಗಿನೆರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶಗೊಳಿಸಿದೆ. ವನ್ಯ ಜೀವಿಗಳಿಗೆ ಹಾಗೂ ಜಲಚರಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಕಿರು ಜಲ ವಿದ್ಯುತ್ ಯೋಜನಾ ಕಾಮಗಾರಿಯಲ್ಲಿ ಸುಮಾರು 13 ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಿರುವುದರಿಂದ ಯೋಜನೆ ಮುಂದುವರೆಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು 2011ರ ಅಕ್ಟೋಬರ್ 17ರಂದು ಇಲ್ಲಿಯ ವಲಯ ಅರಣ್ಯ ಅಧಿಕಾರಿ ರತ್ನಪ್ರಭ ಅವರು ಡಿಎಫ್‌ಒ ಅಂಬಾಡಿ ಮಾದವ್‌ಗೆ  ವರದಿ ನೀಡಿದ್ದಾರೆ.

ಕಾಮಗಾರಿಯಲ್ಲಿ ತೊಡಗಿರುವ  ಕಾರ್ಮಿಕರು ಹಾಗೂ ಸಿಬ್ಬಂದಿ ಯಾರು ಎಂಬ ಬಗ್ಗೆ ಕಂಪೆನಿ ಇಲಾಖೆಗೆ ಮಾಹಿತಿ ನೀಡಿಲ್ಲ. ಅವರಲ್ಲಿ ಯಾವುದೇ ಗುರುತಿನ ಪತ್ರಗಳಿಲ್ಲ. ಅರಣ್ಯದ ಒಳಗೆ ಓಡಾಡು ತ್ತಿರುವ ವಾಹನಗಳ ವಿವರ ನೀಡಿ ಇಲಾಖೆಯಿಂದ ಪರವಾನಗಿ ಪಡೆದಿಲ್ಲ. ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಶ್ಯಾಂಮರಾವ್ ಅವರಿಗೆ ನೋಟಿಸ್ ನೀಡಿದ್ದರೂ, ಅವರಿಂದ ಇಲಾಖೆಗೆ ಯಾವುದೇ ಉತ್ತರ ಬಂದಿಲ್ಲ. ಆದ್ದರಿಂದ ಯೋಜನಾ ಕಾಮಗಾರಿ ಮುಂದುವರೆಸುವ ಬಗ್ಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು 2011ರ ಅಕ್ಟೋಬರ್ 22ರಂದು ಡಿಎಫ್‌ಒ ಅವರಿಗೆ ಆರ್‌ಎಫ್‌ಒ ವರದಿ ಸಲ್ಲಿಸಿದ್ದಾರೆ.

ಜೆನ್ ಕಂಪೆನಿ ಅರಣ್ಯ ಹೆಚ್ಚುವರಿ ಬಳಕೆ, ಕಾನೂನು ಬಾಹಿರವಾಗಿ ಸ್ಫೋಟಕಗಳ ಬಳಕೆ, ವನ್ಯ ಜೀವಿಗಳಿಗೆ ಧಕ್ಕೆ ಸೇರಿದಂತೆ ಹಲವು ಆರೋಪ ಎಸಗುತ್ತಲೇ ಬಂದಿದೆ. ಭಾರೀ ಪ್ರಮಾಣದ ಯಂತ್ರಗಳಿಂದ ಅತಿ ಕಡಿಮೆ ಸಮಯದಲ್ಲಿ ಕಾಮಗಾರಿ ನಿರ್ವಹಿಸುವ ಸಾಧ್ಯತೆಯಿದ್ದು, ಯೋಜನೆ ಕಾಮಗಾರಿ ಮುಂದುವರೆಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಲು ವಿಳಂಬ ಮಾಡಿದ್ದಲ್ಲಿ, ಮುಂದಿನ ಆಗು ಹೋಗುಗಳಿಗೆ ತಮ್ಮ ಜವಬ್ದಾರಿ ಇರುವುದಿಲ್ಲ.

ಆದ್ದರಿಂದ ಕೂಡಲೇ ಸೂಕ್ತ ನಿರ್ದೇಶನ ನೀಡಬೇಕು ಎಂದು 2011ರ ನವೆಂಬರ್ 30ರಂದು ಆರ್‌ಎಫ್‌ಒ  ಮತ್ತೊಂದು ವರದಿಯನ್ನು ಡಿಎಫ್‌ಒ ಅವರಿಗೆ ಸಲ್ಲಿಸಿದ್ದಾರೆ. 2011ರ ಡಿಸೆಂಬರ್ 4ರಂದು ಹೀಗೆ ರಕ್ಷಿತ ಅರಣ್ಯದಲ್ಲಿ ಮಾರುತಿ ಪವರ್ ಜೆನ್ ಕಂಪೆನಿ ಸರ್ಕಾರದ ಷರತ್ತುಗಳು ಹಾಗೂ ಅರಣ್ಯ ಕಾಯಿದೆ ಉಲ್ಲಂಘನೆ ಮಾಡಿರುವುದರಿಂದ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ವಲಯ ಅರಣ್ಯ ಅಧಿಕಾರಿಗಳು ಸುಮಾರು 10 ಪತ್ರಗಳನ್ನು ಬರೆದರೂ ಸಹ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾದವ್ ಅವರು ಕಂಪನಿಯ ಯೋಜನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಕಂಪೆನಿ ಕಾನೂನು ಉಲ್ಲಂಘಿಸಿರುವ ಬಗ್ಗೆ ಹಲವು ಪತ್ರ ಬರೆದರೂ ಸಹ  ಡಿಎಫ್‌ಒ ಅವರು ಯೋಜನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆ ಆರ್‌ಎಫ್‌ಒ ಅವರಿಗೆ ನಿರ್ದೇಶನ ನೀಡದೆ ಇರುವುದನ್ನು ಇಲಾಖೆ ಮೇಲಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.