ADVERTISEMENT

ತಂಬಾಕು ಬೆಲೆ ಕುಸಿತ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:45 IST
Last Updated 25 ಫೆಬ್ರುವರಿ 2012, 5:45 IST

ರಾಮನಾಥಪುರ: ಇಲ್ಲಿನ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದೇ ಮಂಡಳಿಯ ಅಧೀಕ್ಷಕರು ವರ್ತಕರ ಕೈಗೊಂಬೆಯಂತೆ ವರ್ತಿಸುತ್ತಿರುವ ಪರಿಣಾಮ ದರ ಕುಸಿತಗೊಂಡು ಅಪಾರ ಪ್ರಮಾಣದ ನಷ್ಟ ಅನುಭವಿಸಬೇಕಾಗಿದೆ ಎಂದು ಆರೋಪಿಸಿ ರೈತರು ಶುಕ್ರವಾರ ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿ ದಿಢೀರ್ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯ ಪ್ಲಾಟ್ ಫಾರಂ 63ರಲ್ಲಿ ಬೆಳಿಗ್ಗೆ 9 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಿ ಒಂದೆರಡು ಸಾಲುಗಳ ಬೇಲ್‌ಗಳನ್ನು ಬೇಕಾಬಿಟ್ಟಿ ಬೆಲೆಗೆ ಕೂಗಲಾಯಿತು. ಅಷ್ಟರಲ್ಲಿ ಸಿಟ್ಟಿಗೆದ್ದ ರೈತರು ಮಂಡಳಿ ಅಧೀಕ್ಷಕರು ಮತ್ತು ವರ್ತಕರಿಗೆ ಮುತ್ತಿಗೆ ಹಾಕಿ ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿ ಪ್ರತಿಭಟನೆಗೆ ಇಳಿದರು.

ಹರಾಜಿನಲ್ಲಿ ಭಾಗವಹಿಸುವ ವರ್ತಕರು ಕನಿಷ್ಠ ಬೆಲೆಗೆ ಕೂಗಿದರೂ ಅದಕ್ಕೆ ಯಾವುದೇ ಪ್ರತಿರೋಧ ತೋರದೇ ಅಧೀಕ್ಷಕರು ಒಪ್ಪಿಗೆ ಸೂಚಿಸುತ್ತಾರೆ. ಅಧೀಕ್ಷಕರು ವರ್ತಕರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ತಂಬಾಕು ಉತ್ಪಾದಿಸಿದ ರೈತರು ನಷ್ಟಕ್ಕೆ ಒಳಗಾಗಿ ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದುವರೆಗೂ ಒಂದು ಕೆ.ಜಿ. 125 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಣಮಟ್ಟದ ತಂಬಾಕಿನ ದರ ಶುಕ್ರವಾರ ದಿಢೀರ್ 60ರಿಂದ 65ರೂಪಾಯಿಗೆ ಇಳಿಸಲಾಯಿತು. 80ರಿಂದ 110 ರೂಪಾಯಿಗೆ ಕೊಳ್ಳಲಾಗುತ್ತಿದ್ದ ಬೇಲ್‌ಗಳನ್ನು 40ರಿಂದ 50 ರೂಪಾಯಿಯಷ್ಟು ಕಡಿಮೆಗೆ ಬೆಲೆಗೆ ಕೂಗಲಾಗುತ್ತಿದೆ. ಹೊಗೆಸೊಪ್ಪು ಕೊಳ್ಳುವ ಮನಸ್ಸಿಲ್ಲದಿದ್ದರೆ ಬಾಗಿಲು ಬಂದ್ ಮಾಡಿಕೊಂಡು ಮನೆಗೆ ಹೋಗಲಿ. ಇದನ್ನು ಬಿಟ್ಟು ಬೇಡದ ಬೆಲೆಗೆ ಖರೀದಿಸಿ ವಂಚಿಸಲಾಗುತ್ತಿದೆ ಎಂದು ರೈತರು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಧಾರಣೆ ಕುಸಿತದ ಕಾರಣ ಹೊಗೆಸೊಪ್ಪು ಬೆಳೆದ ರೈತರು ಬೆಳೆಗಾಗಿ ಮಾಡಿದ ಸಾಲವನ್ನು ತೀರಿ ಸಲು ಸಾಧ್ಯವಾಗದೇ ಕಣ್ಣೀರಿಡುತ್ತಿದ್ದಾರೆ. 1 ಕೆ.ಜಿ. ತಂಬಾಕನ್ನು ಕೇವಲ 40 ರೂಪಾಯಿಗೆ ಮಾರಾಟ ಮಾಡುವುದರಿಂದ 1 ಕ್ವಿಂಟಲ್‌ಗೆ ರೂ. 4 ಸಾವಿರ ಸಿಗುತ್ತದೆ.
 
ಆದರೆ 1 ಕ್ವಿಂಟಲ್ ಹೊಗೆ ಸೊಪ್ಪು ಉತ್ಪಾದಿಸಲು ತಗಲುತ್ತಿರುವ ರಸಗೊಬ್ಬರ, ಕೂಲಿ, ಸೌದೆ, ಸಾಗಾಣೆ ವೆಚ್ಚವನ್ನು ಲೆಕ್ಕ ಹಾಕಿದರೆ ರೈತರಿಗೆ ನಯಾ ಪೈಸೆ ಲಾಭವಿಲ್ಲದೇ ನಷ್ಟದ ಹೊರೆ ಹೊತ್ತುಕೊಳ್ಳಬೇಕಾಗಿದೆ. ಶಾಸಕ ಎ. ಮಂಜು ಮತ್ತು ಸಂಸದ ಎಚ್.ಡಿ. ದೇವೇಗೌಡರೂ ಸಹ ರೈತರ ಸಂಕಷ್ಟ ಅರಿಯುತ್ತಿಲ್ಲ  ಎಂದು ರೈತರು ಕಿಡಿಕಾಡಿದರು.

ಸ್ವಲ್ಪ ಹೊತ್ತಿನ ಬಳಿಕ ಆಗಮಿಸಿದ ಅಧೀಕ್ಷಕರು ಹರಾಜು ಪ್ರಕ್ರಿಯೆಯನ್ನು ಪುನರಾರಂಭಿಸಿದರು. ಆಗಲೂ ಬೆಲೆ ಮಾತ್ರ ಕೊಂಚವೂ ಚೇತರಿಕೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.