ADVERTISEMENT

ತಡೆಗೋಡೆ ಇಲ್ಲದ ಕೆರೆ ಏರಿ ರಸ್ತೆ!

ಗ್ರಾಮ ಸಂಚಾರ

ಎಂ.ಆರ್.ಬಾಬು
Published 21 ಆಗಸ್ಟ್ 2013, 9:17 IST
Last Updated 21 ಆಗಸ್ಟ್ 2013, 9:17 IST

ರಾಮನಾಥಪುರ: ಕೊಣನೂರಿನ ಮಾರ್ಗವಾಗಿ ಕೆರೆಕೊಡಿ ಗ್ರಾಮ, ಬಿಸ್ಲಹಳ್ಳಿ, ಹಂಡ್ರಂಗಿ, ಕೆಸವತ್ತೂರು ಇನ್ನು ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಕೆರೆಕೋಡಿ ರಸ್ತೆ ನೂರಾರು ವರ್ಷ ಹಳೆಯದು. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಕೊಣನೂರಿಗೆ ವಾಹನದ ಮೂಲಕ ಬರಬೇಕಾಗಿದೆ.

ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು ಕೆರೆಗೆ ತಡೆಗೋಡೆ ಇಲ್ಲದ ಪರಿಣಾಮ ಅನಾಹುತ ಸಂಭವಿಸುವ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಕೆರೆ ಏರಿಮೇಲೆ ಒಡಾಡುವುದೇ ದೊಡ್ಡ ಸವಾಲು ಎನ್ನುತ್ತಾರೆ ಕೆರೆಕೊಡಿ ಗ್ರಾಮದ ರಾಮೇಗೌಡ.
ಕೆರೆಯ ಎಡಭಾಗದಲ್ಲಿ ಸುಮಾರು 25 ಅಡಿ ಆಳವಿರುವ ಅಡಿಕೆ ತೋಟವಿದೆ. ಇನ್ನು ಬಲಭಾಗದಲ್ಲಿ ಸುಮಾರು 50 ಅಡಿ ಆಳವಿರುವ ಅದರಲ್ಲೂ ಒಮ್ಮೆಯೂ ಹೂಳೆತ್ತದ ಈ ಕೆರೆ ಯಾವ ಋತುಮಾನದಲ್ಲಿಯೂ ನೀರು ಇಂಗಿರುವುದಿಲ್ಲ.

ಕೆರೆ ಏರಿ ವಿಸ್ತರಣೆ ಮತ್ತು ತಡೆಗೋಡೆ ನಿರ್ಮಾಣ ತುರ್ತಾಗಿ ನಡೆಯಬೇಕಿದೆ. ಪ್ರಸ್ತುತ ಕೆರೆ ಸಂಪೂರ್ಣವಾಗಿ ತುಂಬಿರುವುದರಿಂದ ಯಾವುದೇ ಕಾಮಗಾರಿ ಮಾಡುವುದು ಕಷ್ಟ. ಅದರೆ ಕೆರೆ ಏರಿ ಎರಡು ಕಡೆ ಕಬ್ಬಿಣದ ರಾಡುಗಳನ್ನು ನೆಟ್ಟು ತಾತ್ಕಲಿಕವಾಗಿ ರಕ್ಷಣೆ ಒದಗಿಸಬೇಕಿದೆ.

ಕೆರೆ ಏರಿಯನ್ನು ಹಿಂದಿನ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಲಾಗಿದ್ದು ಪ್ರಸ್ತುತ ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ಹೋಗಿ ಬರುವ ಮಕ್ಕಳು, ಸಾರ್ವಜನಿಕರು ಮನೆಗೆ ತಲುಪುವ ತನಕ ಪೋಷಕರಿಗೆ ಆತಂಕ ಕಟ್ಟಿಟ್ಟ ಬುತ್ತಿ.

ಈ ಕೂಡಲೆ ಸಂಭಂದಪಟ್ಟ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸದೆ ಹೋದರೆ ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT