ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:40 IST
Last Updated 19 ಡಿಸೆಂಬರ್ 2013, 5:40 IST

ಹಾಸನ: ಸಕಲೇಶಪುರದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಹಾಗೂ ಅಗನಿ ಗುಡ್ಡದಿಂದ ಹಾನಬಾಳು ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ಸಂಬಂಧಿಸಿದಂತೆ ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್‌ ನೀಡಲಾಗಿದ್ದು, ಜಿಲ್ಲಾಧಿಕಾರಿ ಇದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು’ ಎಂದು ಕಾಂಗ್ರೆಸ್‌ ಮುಖಂಡ ಡಿ.ಸಿ. ಸಣ್ಣಸ್ವಾಮಿ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₨ 80 ಲಕ್ಷ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಸ್ವಲ್ಪ ಕಾಮಗಾರಿ ನಡೆಸಿದ ಬಳಿಕ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕೆಲವು ತಿಂಗಳ ಬಳಿಕ ಹಿಂದೆ ಮಾಡಿದ್ದ ಕಾಮಗಾರಿಯನ್ನೇ ಮತ್ತೊಮ್ಮೆ ತೋರಿಸಿ ಪುನಃ ಹೆಚ್ಚುವರಿಯಾಗಿ 25 ಲಕ್ಷ ರೂಪಾಯಿಯ ಬಿಲ್‌ ಕಳುಹಿಸಲಾಗಿತ್ತು. ಒಟ್ಟಾರೆ ಅಂಬೇಡ್ಕರ್‌ ಭವನದ ಅಂದಾಜು ಮೊತ್ತವನ್ನು ₨ 1.05 ಕೋಟಿಗೆ ಹೆಚ್ಚಿಸಲಾಗಿದೆ.

ಇದೇ ರೀತಿ ಅಗನಿ ಗುಡ್ಡದಿಂದ ಹಾನಬಾಳು ಗ್ರಾಮಕ್ಕೆ ನೀರೊದಗಿಸುವ ಯೋಜನೆಯನ್ನು ಕಾಂಗ್ರೆಸ್‌ನವರೇ ರೂಪಿಸಿ ₨ 40 ಲಕ್ಷ ವೆಚ್ಚ ಮಾಡಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಾಂಗ್ರೆಸ್‌ ಸರ್ಕಾರ ಹೋಗಿತ್ತು. ಇದಾದ ಬಳಿಕ ಈಚೆಗೆ ಮತ್ತೆ ಆಗಿರುವ ಕಾಮಗಾರಿಯನ್ನೇ ತೋರಿಸಿ ಮತ್ತೆ ₨ 30 ಲಕ್ಷ ಬಿಲ್‌ ಕಳುಹಿಸಲಾಗಿದೆ. ಈ ವಿಚಾರ ನಮ್ಮ ಗಮನಕ್ಕೆ ಬಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರಿಂದ ಹಣ ಪಾವತಿ ಆಗಿಲ್ಲ. ಇನ್ನೊಬ್ಬ ಎಂಜಿನಿಯರ್‌ ಮೂಲಕ ತನಿಖೆ ನಡೆಸಿದಾಗ ಹಿಂದಿನ ಕಾಮಗಾರಿಯನ್ನೇ ತೋರಿಸಿ ಮತ್ತೆ ₨ 30 ಲಕ್ಷ ಲಪಟಾಯಿಸುವ ಪ್ರಯತ್ನ ನಡೆದಿತ್ತು ಎಂಬುದು ಬಯಲಾಗಿತ್ತು. ಬಿಲ್‌ ಪಾವತಿಸುವಂತೆ ಸ್ಥಳೀಯ ರಾಜಕಾರಣಿ ಅಧಿಕಾರಿಗಳ ಮೇಲೆ ಒತ್ತಡ ಹೆರಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಣ್ಣಸ್ವಾಮಿ ಒತ್ತಾಯಿಸಿದರು.

ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗೆ ಹಲವು ಕೋಟಿ ರೂಪಾಯಿ ಮಂಜೂರಾಗಿದೆ. ಆದರೆ, ಸ್ಥಳೀಯ ಶಾಸಕರು ತಾನು ಹೇಳಿದವರಿಗೇ ಗುತ್ತಿಗೆ ನೀಡಬೇಕು ಎಂದು ಹಟ ಹಿಡಿದಿದ್ದಾರೆ. ಇದು ಕಳಪೆ ಕಾಮಗಾರಿಗೆ ದಾರಿಮಾಡಿಕೊಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಎಚ್.ಬಿ. ಭಾಸ್ಕರ, ಹುರುಡಿ ಅರುಣ್‌ಕುಮಾರ್‌, ತುಳಸೀ ಪ್ರಸಾದ್‌, ರಹಮತ್ತುಲ್ಲ, ಬಿ. ಸುಂದರಮ್ಮ, ಕೋಮಾರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.