ADVERTISEMENT

ದಕ್ಷಿಣ ಕಾಶಿ:ಭಕ್ತರ ಗೋಳು ಕೇಳೊರ‌್ಯಾರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 8:40 IST
Last Updated 11 ಜನವರಿ 2012, 8:40 IST

ರಾಮನಾಥಪುರ: `ದಕ್ಷಿಣ ಕಾಶಿ~ ಎಂದೇ ಪ್ರಸಿದ್ದಿಯಾಗಿರುವ ಶ್ರೀಕ್ಷೇತ್ರವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕಾರಣ ಭಕ್ತರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ.

ಪೌರಾಣಿಕ ಹಿನ್ನೆಲೆ ಸಾರುವ ಚಾತುರ್ಯುಗ ಮೂರ್ತಿ ಶ್ರೀರಾಮೇಶ್ವರ, ಪಟ್ಟಾಭಿರಾಮ, ಅಗಸ್ತ್ಯೇಶ್ವರ ಸೇರಿದಂತೆ ಹಲವು ಐತಿಹಾಸಿಕ ದೇಗುಲಗಳು ಇರುವ ಶ್ರೀಕ್ಷೇತ್ರವು ಅಭಿವೃದ್ಧಿಯಿಂದ ವಂಚಿತವಾಗಿದೆ.

ಅಧಿಕ ಭಕ್ತರನ್ನು ಹೊಂದಿರುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಜಾತ್ರಾ ರಥೋತ್ಸವ ಪ್ರತಿ ವರ್ಷ ಮಾರ್ಗಶಿರ ಮಾಸದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿ ಜಾತ್ರೆ ಮುಗಿದು ವಾರ ಕಳೆದರೂ ಭಕ್ತರ ಸಂಖ್ಯೆ ಇಳಿಮುಖವಾಗಿಲ್ಲ.

ಕಳೆದ ಕೆಲವು ವರ್ಷಗಳಿಂದ ದೇವಸ್ಥಾನಕ್ಕೆ ಬರುವ ಭಕ್ತರಿಂದ ಲಕ್ಷ ರೂಪಾಯಿ ಸಂಗ್ರಹವಾಗಿರುತ್ತವೆ. ಆದರೆ, ಇಲ್ಲಿ ಸೌಲಭ್ಯದಲ್ಲಿ ಬದಲಾವಣೆಗಳೇನೂ ಕಾಣಿಸುವುದಿಲ್ಲ. ಭಕ್ತರು ಪರದಾಡುವುದು ಮಾತ್ರ ಗೋಚರಿಸುತ್ತದೆ.

ರಸ್ತೆಗಳು ಹದಗೆಟ್ಟು ವಾಹನಗಳ ಸಂಚಾರ ದುಸ್ತರವಾಗಿದೆ. ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿಂದ ಸೇತುವೆ ತನಕ ಗುಂಡಿ ಬಿದ್ದು ದೂಳುಮಯವಾದ ಅರ್ಧ ಕಿ.ಮೀ. ರಸ್ತೆಗೆ ಡಾಂಬರು ಹಾಕಲು ಲೋಕೋಪಯೋಗಿ ಇಲಾಖೆ ಮನಸ್ಸು ಮಾಡಿಲ್ಲ. ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಮೇಲ್ದ್ದೆದು ರಸ್ತೆಗೆ ಬಿಳಿ ಮಣ್ಣು ಸುರಿದು ಕೈತೊಳೆದುಕೊಂಡಿದೆ. ಇದರಿಂದ ವಾಹನಗಳು ಪ್ರಯಾಸದ ಪ್ರಯಾಣ ಮಾಡಬೇಕಾಗಿದೆ.

ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದೆ ದಾರಿಯುದ್ದಕ್ಕೂ ನಿಲ್ಲಿಸಬೇಕು. ದೂರದ ಊರುಗಳಿಂದ ಬಂದವರು ಉಳಿದುಕೊಳ್ಳಲು ಉತ್ತಮ ಲಾಡ್ಜ್ ಸೌಲಭ್ಯವಿಲ್ಲ. ದೇವಸ್ಥಾನ ಎಲ್ಲಿದೆ ಎಂಬುದನ್ನು ತಿಳಿಸಲು ನಾಮ ಫಲಕ ಹಾಕಿಲ್ಲ. ಪ್ರವಾಸಿಗರು ಶುದ್ಧೀಕರಿಸದಿರುವ ಕಾವೇರಿ ನೀರನ್ನು ಸೇವಿಸಬೇಕಾಗಿದೆ.

ದೇವಸ್ಥಾನದ ಸುತ್ತ ಇರುವ ಅಂಗಡಿಗಳನ್ನು ತೆರವು ಮಾಡದಿರುವುದರಿಂದ ಜಾತ್ರೆ ಸಮಯದಲ್ಲಿ ಭಕ್ತರ ಸರದಿ ಸಾಲು ನಿಲ್ಲಲು ಪರದಾಡಬೇಕಾಗಿದೆ. ಪುಣ್ಯ ಸ್ನಾನಕ್ಕಾಗಿ ಕುಮಾರಾಧಾರ ತೀರ್ಥ, ಗೋಗರ್ಭಕ್ಕೆ ತೆರಳಲು ಭಕ್ತರು ಹರ ಸಾಹಸ ಮಾಡಬೇಕು. ಕನಿಷ್ಟ ಕಾಲ್ನಡಿಗೆಯಲ್ಲಿ ಸಾಗಲು ಸೂಕ್ತ ಮೆಟ್ಟಿಲು ಮಾಡಿಸಲು ಆಗುವುದಿಲ್ಲವೇ, ನೀರಿಗೆ ಬಿದ್ದು ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂದು ಪ್ರವಾಸಿಗರು ಶಪಿಸುತ್ತಾರೆ. ಈದಾರಿಯಲ್ಲಿ ಹಲವು ಮಂದಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಭಕ್ತರು ಸ್ನಾನ ಮಾಡುವ ನದಿ ತಟದ ಆಸುಪಾಸಿನ ಸ್ಥಳ ಬಯಲು ಕೆರೆ ಶೌಚಾಲಯವಾಗಿ ಗಬ್ಬೆದ್ದಿದೆ. ಜಾತ್ರೆ ಸಮಯದಲ್ಲಾದರೂ ಇಲ್ಲಿ ಮೂರ‌್ನಾಲ್ಕು ಕಡೆ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಸ್ನಾನ ಘಟ್ಟವಿಲ್ಲದೆ ಮಹಿಳೆಯರು ಬಟ್ಟೆ ಬದಲಿಸಿಕೊಳ್ಳಲು ಮುಜುಗರಕ್ಕೆ ಒಳಗಾಗಬೇಕಿದೆ. ಪ್ರತಿ ಬಾರಿ ಎಲ್ಲೋ ಒಂದು ಕಡೆ ಮಾತ್ರ ಪ್ಲಾಸ್ಟಿಕ್‌ನಿಂದ ಗೂಡನ್ನು ನಿರ್ಮಿಸುತ್ತಿದ್ದು ಅದರೊಳಗೆ ಬಟ್ಟೆ ಬದಲಿಸಿಕೊಳ್ಳಬೇಕು. ಅದು ಕೂಡ ಕೆಲವೇ ದಿನಗಳಲ್ಲಿ ಹರಿದು ಚೂರಾಗಿ ಬಯಲಾಗಿ ತೆರೆದುಕೊಳ್ಳುತ್ತದೆ.

ನಿತ್ಯ ಸಹಸ್ರಾರು ಭಕ್ತರು ಹಾಗೂ ಯಾತ್ರಿಕರು ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ನಡುವೆ ದೇವರ ದರ್ಶನ ಮುಗಿಸಿ ತೆರಳಬೇಕಾಗಿದೆ. ಹೀಗಾಗಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವು ಪ್ರವಾಸಿ ತಾಣದ ಅಭಿವೃದ್ಧಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿ ಅನುಕೂಲ ದೊರಕಿಸಿಕೊಡಬೇಕು ಎಂಬುದು ಭಕ್ತರ ಒತ್ತಾಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.