ADVERTISEMENT

ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಬನ್ನಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:35 IST
Last Updated 1 ಅಕ್ಟೋಬರ್ 2011, 9:35 IST

ಹಾಸನ: `ಬೂವನಹಳ್ಳಿಯ ಚನ್ನಕೇಶವ ಸ್ವಾಮಿ ದೇವಸ್ಥಾನದ ಅರ್ಚಕರ ಪಾರಂಪರ್ಯ ಹಾಗೂ ಜಮೀನಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಕರೀಗೌಡ ಅವರು ಸುಳ್ಳು ಆರೋಪ ಮಾಡಿದ್ದಾರೆ. ಅವರಲ್ಲಿ ದಾಖಲೆಗಳಿದ್ದರೆ ಬೆದರಿಸುವ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನ್ಯಾಯಾಲಯದಲ್ಲಿ ಹೋರಾಟ ನಡೆಸಲಿ. ನ್ಯಾಯಾಲಯದ ಆದೇಶಕ್ಕೆ ನಾವು ಬದ್ಧರಿದ್ದೇವೆ~ ಎಂದು ಅರ್ಚಕ ಬಿ.ಎಸ್. ಕೇಶವ ಅಯ್ಯಂಗಾರ್ ಹಾಗೂ ಅವರ ಪುತ್ರ ದೀಪಕ್ ನುಡಿದಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿ ನೀಡಿದರು. ಕೇಶವ ಅಯ್ಯಂಗಾರ್ ತಾತನ ಕಾಲದಿಂದಲೇ ನಾವು ವಂಶಪಾರಂಪರ್ಯವಾಗಿ ಇಲ್ಲಿ ಪೂಜೆ ಮಾಡುತ್ತ ಬಂದಿದ್ದೇವೆ. ಮಗ ದೀಪಕ್ ಸೇವೆಯನ್ನೂ ಸೇರಿಸಿದರೆ ಸುಮಾರು 90ವರ್ಷಗಳಿಂದ ನಾವಿಲ್ಲಿ ದುಡಿಯುತ್ತಿದ್ದೇವೆ. ದೇವಸ್ಥಾನಕ್ಕೆ ಇನಾಂ ಭೂಮಿಯಾಗಿ ಸುಮಾರು 15ಎಕರೆ ಜಾಗವಿತ್ತು. ಇನಾಂ ರದ್ದತಿ ಕಾಯ್ದೆ ಬಂದಾಗ ನಾವು ಕದ್ದು ಅರ್ಜಿ ಸಲ್ಲಿಸಿದ್ದೆವು ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ.

ವಾಸ್ತವವೆಂದರೆ ಊರಿನ ಕರೇಗೌಡ ಹಾಗೂ ರಂಗೇಗೌಡ ಎಂಬುವವರೂ ಸಹ ಅರ್ಜಿ ಸಲ್ಲಿಸಿದ್ದರು. ವಿಶೇಷ ಇನಾಂ ಜಿಲ್ಲಾಧಿಕಾರಿ ನ್ಯಾಯಾಲ ಯದಲ್ಲಿ ವಿಚಾರಣೆ ನಡೆದು ನಿಯ ಮಾನುಸಾರ ನಮಗೆ (ಶೇಷಾದ್ರಿ ಅಯ್ಯಂಗಾರ್ ಅವರ ಹೆಸರಿಗೆ) ಆ ಜಮೀನು ಮಂಜೂರಾಗಿತ್ತು. ಇದಕ್ಕೆ ದಾಖಲೆಗಳಿವೆ.

ಜಮೀನು ಲಪಟಾಯಿಸಬೇಕೆಂಬ ಉದ್ದೇಶದಿಂದ 1974-75ರಲ್ಲಿ ಬಿಎಸ್‌ಎಸ್‌ಎನ್ ಅಧ್ಯಕ್ಷರೂ ಆಗಿದ್ದ ಶೇಷಾದ್ರಿ ಅಯ್ಯಂಗಾರ್  ವಿರುದ್ಧ ಕೆಲವರು ಹಣ ದುರ್ಬಳಕೆಯ ದೂರು ನೀಡಿದ್ದರು. ಆದರೆ ವಿಚಾರಣೆ ನಡೆದು ಇವರು ನಿರ್ದೋಷಿ ಎಂದು ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ.

ಮಾಜಿ ಶಾಸಕರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿಲ್ಲ. ಶೇಷಾದ್ರಿ ಅಯ್ಯಂಗಾರ್ ಅವರು 1972ರಲ್ಲಿ ಈ ಭೂಮಿಯನ್ನು ಟ್ರಸ್ಟ್‌ಗೆ ಬರೆದುಕೊಟ್ಟಿದ್ದರು ಎಂದು ಹೇಳಲಾಗಿದೆ. ಆದರೆ ಇನಾಮ್ ರದ್ದತಿ ಕಾಯ್ದೆಯಡಿ 1974-75ರಲ್ಲಿ ಶೇಷಾದ್ರಿ ಅಯ್ಯಂಗಾರ್ ಹೆಸರಿಗೆ ಖಾತೆಯಾಗಿದೆ. 72ರಲ್ಲಿ ಅದನ್ನು ಟ್ರಸ್ಟ್‌ಗೆ ನೀಡುವುದಾದರೂ ಹೇಗೆ ? ಅದೂ ಅಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಯಾವ ಟ್ರಸ್ಟ್ ಸಹ ಇಲ್ಲ.

ಇದು ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಸಾಬೀತಾಗಿದೆ. ಈ ವಿವಾದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನ್ಯಾಯಾಲಯಗಳ ತೀರ್ಪುಗಳ ಪ್ರತಿಗಳು ಇವೆ. ಮಾಜಿ ಶಾಸಕರು ನೀಡಿರುವ ದಾಖಲೆಗಳು ಯಾವ ರೀತಿಯಲ್ಲೂ ತಾಳೆಯಾಗುವುದಿಲ್ಲ. ಅವರು ಸುಳ್ಳು ಮಾಹಿತಿ ನೀಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ದೀಪಕ್ ಆರೋಪಿಸಿದ್ದಾರೆ.

ತಮಗೆ ಬಂದ ಭೂಮಿಯಲ್ಲೇ ಎರಡು ಎಕರೆ ಭೂಮಿಯನ್ನು ಹಿಂದೆ ಶೇಷಾದ್ರಿ ಅಯ್ಯಂಗಾರ್ ಅವರೇ ಶಾಲೆಗಾಗಿ ನೀಡಿದ್ದರು. ಅಂದು ವಿಶ್ವಾಸದಿಂದ ಮೌಖಿಕವಾಗಿ ದಾನ ನೀಡಿರುವುದರಿಂದ ಆ ಜಾಗವ ಇನ್ನೂ ಶೇಷಾದ್ರಿ ಅಯ್ಯಂಗಾರ್ ಅವರ ಹೆಸರಿನ್ಲ್ಲಲೇ ಇದೆ. ಹೀಗಿದ್ದರೂ ಕರೀಗೌಡರು ಅಕ್ರಮವಾಗಿ ಇನ್ನೂ ಎರಡು ಎಕರೆ ಜಮೀನನ್ನು ರಾಮಪ್ರಕಾಶ್ ಎಂಬುವವರಿಗೆ ದಾನವಾಗಿ ನೀಡಿದ್ದಾರೆ. ನಮ್ಮ ಹೆಸರಿನಲ್ಲಿರುವ ಜಮೀನನ್ನು ಅವರು ದಾನ ನೀಡಿದ್ದು ಹೇಗೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು.

ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನ್ಯಾಯಾಲಯದಿಂದ ಹೈಕೋರ್ಟ್‌ವರೆಗೆ ಹಲವು ಹಂತಗಳಲ್ಲಿ ವಿಚಾರಣೆ ನಡೆಯುತ್ತಿದೆ. ದಾಖಲೆ ಗಳಿದ್ದರೆ ಅಲ್ಲಿ ಹೋರಾಟ ನಡೆಸಬ ಹುದು. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕಾಗುತ್ತದೆ.  ನ್ಯಾಯಾಂಗ ಹೋರಾಟ ನಡೆಸಿದರೆ ತಮಗೆ ಜಯ ಸಿಗುವುದಿಲ್ಲ ಎಂದು ತಿಳಿದು ಅವರು ಗೂಂಡಾಗಿರಿಯ ಹಾದಿ ಅನುಸರಿಸುತ್ತಿದ್ದಾರೆ.
 
ಸುಮಾರು 80 ರಿಂದ 100  ಬೆಂಬಲಿಗರನ್ನು ಬಿಟ್ಟರೆ ಗ್ರಾಮಸ್ಥರು ಈಗಲೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಆದರೆ ನಮ್ಮ ಕುಟುಂಬಕ್ಕೆ ನಿಷೇಧ ಹೇರಿ ನಾಲ್ಕು ದಿನ ಆಟೋಗೆ ಮೈಕ್ ಕಟ್ಟಿ ಪ್ರಚಾರ ನಡೆಸಿದ್ದಾರೆ. ಶಾಸ್ತ್ರ ಕೇಳಲು ನಮ್ಮ ಮನೆಗೆ ಬರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಯಾರಿಗೆ ಅನ್ಯಾಯವಾಗಿದೆ, ಯಾರನ್ನು ಗಡೀಪಾರು ಮಾಡಬೇಕು ಎಂಬುದನ್ನು ಗ್ರಾಮಸ್ಥರೇ ತೀರ್ಮಾನ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಕೀಲ ಜಿ.ಕೆ. ಪ್ರಸನ್ನ, ಅರ್ಚಕರ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಪ್ರಸಾದ್, ವೇಣುಗೋಪಾಲ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.