ADVERTISEMENT

ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಿ

ಏತ ನೀರಾವರಿ ಹೋರಾಟ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:18 IST
Last Updated 17 ಜೂನ್ 2018, 11:18 IST

ಹಾಸನ : ತಾಲ್ಲೂಕಿನ ದುದ್ದ ಹೋಬಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ಕಾಚೇನಹಳ್ಳಿ, ಯಗಚಿ, ಹೇಮಾವತಿ ಹಾಗೂ ಎತ್ತಿನಹೊಳೆ ಮೂಲಗಳಿಂದ ನೀರು ತುಂಬಿಸಬೇಕು ಎಂದು ದುದ್ದ ಹೋಬಳಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚೇತನ್ ಆಗ್ರಹಿಸಿದರು.

ದುದ್ದ ಹೋಬಳಿ 10 ಗ್ರಾಮ ಪಂಚಾಯಿತಿ ಹೊಂದಿದೆ. ಇಲ್ಲಿ ದುದ್ದ ಕೆರೆ, ಮೂಲಕೆರೆ, ಲಿಂಗರಸನಹಳ್ಳಿ , ಕಬ್ಬಳ್ಳಿ , ಸೋಮನಹಳ್ಳಿ , ಹೆರಗು, ತೆಂಗಿನ, ಕೋಡಿಹಳ್ಳಿ, ಹೊನ್ನಾವರ, ಕೋರವಂಗಲ, ಬೊಮ್ಮನಹಳ್ಳಿ , ಅಟ್ಟಾವರ, ಆನೆಹಳ್ಳಿ, ಅಟ್ಟಾವರ ಹೊಸಳ್ಳಿ, ಅರಸೀಹಳ್ಳಿ ಕೆರೆಗಳು 100 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹೇಮಾವತಿ, ಯಗಚಿ, ಕೆಂಪುಹೊಳೆ ನದಿಗಳು ಹರಿಯುತ್ತವೆ. ಈ ವರೆಗೆ ಅಧಿಕಾರ ನಡೆಸಿದ ಯಾವುದೇ ಸರ್ಕಾರಗಳು ಹಾಗೂ ರಾಜಕೀಯ ನಾಯಕರು ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡಿಲ್ಲ. ರೈತರು ಕೃಷಿಗೆ ಕೆರೆ ನೀರನ್ನೇ ಅವಲಂಬಿಸಿದ್ದಾರೆ. ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಕೆರೆಗಳ ಹೂಳು ತೆಗೆಸಿಲ್ಲ. ನೀರಿಲ್ಲದೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.

ADVERTISEMENT

ನೀರಿನ ಸಮಸ್ಯೆಯಿಂದ ಕೃಷಿ ಮಾಡಲು ಸಾಧ್ಯವಾಗದೆ ಜನರು ಉದ್ಯೋಗ ಅರಸಿ ನಗರಗಳತ್ತ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ನಿತ್ಯ ಪರದಾಡುವಂತಾಗಿದೆ. ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದು, ರೈತಪರ ಕಾಳಜಿ ಹೊಂದಿರುವ ಅವರು ಕಾಲಮಿತಿಯೊಳಗೆ ನೀರು ತುಂಬಿಸಬೇಕು ಎಂದು ಮನವಿ ಮಾಡಿದರು.

ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ಕೆ. ಸಂತೋಷ್, ಖಜಾಂಚಿ ಅಣ್ಣಾಜಪ್ಪ, ಕಾನೂನು ಸಲಹೆಗಾರರಾದ ಜಿ.ಎಸ್. ವಿಶ್ವನಾಥ್, ಎಚ್.ಆರ್.ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.