ADVERTISEMENT

ದುಶ್ಚಟಗಳಿಗೆ ಬಲಿಯಾಗದಿರಿ

ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ. ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:56 IST
Last Updated 24 ಮಾರ್ಚ್ 2018, 10:56 IST

ಹಾಸನ: ಆರೋಗ್ಯ ಕಾಪಾಡಿಕೊಳ್ಳುವ ಹೊಣೆ ಪ್ರತಿಯೊಬ್ಬರ ಕರ್ತವ್ಯ ಎಂದು ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ವೈದ್ಯಾಧಿಕಾರಿ ಪೂರ್ಣಿಮಾ ಬಾಲಕೃಷ್ಣ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿಲ್ಲಿ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಎಚ್ಐವಿ, ಏಡ್ಸ್ ಕುರಿತ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೀವನದ ಬಂಡಿ ಎಳೆಯಲು ಬಹುಮುಖ್ಯವಾದ ಅಂಶ ಆರೋಗ್ಯ. ಆದ್ದರಿಂದ ಉತ್ತಮ ಆರೋಗ್ಯ ಪ್ರತಿಯೊಬ್ಬರ ಜೀವಾಳ. ಅದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಹೊಣೆಯೂ ನಮ್ಮದೇ ಆಗಿರುತ್ತದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನುಡಿದರು.

ADVERTISEMENT

ಮೆಡಿಕಲ್ ಕಾಲೇಜಿನ ಎಆರ್ ಟಿ ಆಪ್ತ ಸಮಾಲೋಚಕ ಎಚ್.ಕೆ.ಶಿವಶಂಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಹಣದ ಹಿಂದೆ ಬಿದ್ದು ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಜೀವನ ಶೈಲಿ ಬದಲಾಯಿಸಿಕೊಂಡು ಪೌಷ್ಟಿಕ ಆಹಾರ ತೆಗೆದುಕೊಳ್ಳುವಲ್ಲಿ ಹಿಂದೆ ಸರಿಯುತ್ತಿದ್ದಾರೆ. ದೈಹಿಕ ಕ್ರೀಡೆಗಳಾದ ಲಗೋರಿ, ಚಿನ್ನಿ ದಾಂಡು, ಕುಂಟೆ ಬಿಲ್ಲೆ ಹೀಗೆ ಇತರೆ ಆಟಗಳಿಗೆ ಮಹತ್ವ ಕೊಡದೆ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಎಚ್ಚರಿಸಿದರು.

ಯುವಕರು ಜೀವನದ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ಇಲ್ಲವಾದಲ್ಲಿ ಎಚ್‌ಐವಿ ಸೋಂಕಿಗೆ ತುತ್ತಾಗಬೇಕಾಗುತ್ತದೆ. ಮೊದಲಿಗೆ ಅಮೆರಿಕಾದಲ್ಲಿ 1980ರಲ್ಲಿ ಕಾಣಿಸಿಕೊಂಡು, 1982ರಲ್ಲಿ ಭಾರತಕ್ಕೆ ಕಾಲಿಟ್ಟಿತ್ತು. ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತದಾನ, ಸಿರೆಂಜ್‌ನಿಂದ ಹರಡುವ ಸಾಧ್ಯತೆ ಇದೆ. ಸೋಂಕಿತರನ್ನು ಪ್ರೀತಿಯಿಂದ ಕಾಣುವುದರ ಜತೆಗೆ ಮಾನಸಿಕಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಬದುಕು ಎಂಬ ಪ್ರಯಾಣದಲ್ಲಿ ಜೀವನದ ಬಗ್ಗೆ ಕಾಳಜಿ, ಬದ್ಧತೆ ಇರಬೇಕು. ಕಾಯಿಲೆ ಗುಣಪಡಿಸುವ ಪ್ರತಿಬಂಧಕ, ಚಿಕಿತ್ಸಕ ಹಾಗೂ ಸುಧಾರಣ ವಿಧಾನ ಅನುಸರಿಸುವುದು ಅಗತ್ಯ ಎಂದು ಹೇಳಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಪ್ರೊ. ಎಚ್.ಡಿ.ಆನಂದಸ್ವಾಮಿ, ಪ್ರೊ.ವೆಂಕಟೇಶ್ ಹಾಗೂ ಸಂದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.