ADVERTISEMENT

ಧಾರಾಕಾರ ಮಳೆ; ಜನತೆ ತತ್ತರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 10:21 IST
Last Updated 1 ಆಗಸ್ಟ್ 2013, 10:21 IST

ಸಕಲೇಶಪುರ: ಈ ಭಾಗದಲ್ಲಿ ಮಂಗಳವಾರ ಒಂದು ದಿನ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಮುಂದುವರಿದಿದ್ದು, ಬುಧವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸತತವಾಗಿ ಸುರಿಯಿತು. ವರುಣನ ಅಬ್ಬರಕ್ಕೆ ಹಲವೆಡೆ ಮರಗಳು ಉರುಳಿವೆ, ಮನೆಗಳ ಮೇಲ್ಛಾವಣಿಯ ಶೀಟುಗಳು, ಹೆಂಚುಗಳು ಹಾನಿಗೊಂಡಿವೆ.

ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಿಗ್ಗೆ 8.30 ರವರೆಗೆ ಬೀಸಿದ ಗಾಳಿ ರಭಸ ಮತ್ತು ಬಿರು ಮಳೆ ಜನರಲ್ಲಿ ಭಯ ಹುಟ್ಟಿಸಿದೆ. ತಾಲ್ಲೂಕಿನ ಆನೇಮಹಲ್-ಹಾನುಬಾಳು ರಸ್ತೆಯ ವಾಟೆಗಂಡಿ ಬಳಿ ವೃಕ್ಷವೊಂದು ಮುಂಜಾನೆ ರಸ್ತೆಗೆ ಉರುಳಿದೆ. ಇದರಿಂದಾಗಿ ಸುಮಾರು 6ಗಂಟೆ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹಾನುಬಾಳು, ಮೂಡಿಗೆರೆ ಚಿಕ್ಕಮಗಳೂರಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಸ್ಥಳೀಯ ಮರ ಕತ್ತರಿಸುವ ಕಾರ್ಮಿಕರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳಲ್ಲಿದ್ದ ಪ್ರಯಾಣಿಕರಿಂದ 1500 ರೂಪಾಯಿ ಸಂಗ್ರಹಣೆ ಮಾಡಿಕೊಂಡು ಮರ ಕತ್ತರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಎರಡು ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು, ಪಟ್ಟಣದಲ್ಲಿ ಸುಮಾರು 8 ಗಂಟೆ ಕಾಲ ವಿದ್ಯುತ್ ಕಡಿತ ಉಂಟಾಗಿತ್ತು. ತಾಲ್ಲೂಕಿನಾದ್ಯಂತ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಹೆತ್ತೂರು, ಯಸಳೂರು, ಅತ್ತಿಹಳ್ಳಿ, ಮಾರನಹಳ್ಳಿ, ಅಗನಿ, ವಳಲಹಳ್ಳಿ, ಪಟ್ಟಣದ ಕುಶಾಲನಗರ ಬಡಾವಣೆ ಹಾಗೂ ಇನ್ನೂ ಹಲವೆಡೆ ಮನೆಗಳ ಗೋಡೆಗಳು ಕುಸಿದು ಅಪಾರ ನಷ್ಟ ಉಂಟಾಗಿದೆ. ವಳಲಹಳ್ಳಿ ಸಮೀಪದ ಹೊಸಹಳ್ಳಿ ಗ್ರಾಮದ ರಾಮಶೆಟ್ಟಿ ಮನೆಯ ಮೇಲ್ಚಾವಣಿಯ ಸಿಮೆಂಟ್ ಶೀಟುಗಳು ಗಾಳಿಯ ರಭಸಕ್ಕೆ ಚಲ್ಲಾಪಿಲ್ಲಿ ಯಾಗಿ ಬಿದ್ದಿವೆ. ಮನೆಯೊಳಗೆ ನೀರು ಆವರಿಸಿದೆ.

ಹೇಮಾವತಿ ಒಳ ಹರಿವು ಹೆಚ್ಚಳ: ಜಿಲ್ಲಿಯ ಜೀವನದಿ ಹೇಮಾವತಿ ನದಿ ಪಾತ್ರದಲ್ಲಿ ಕಳೆದ 48 ಗಂಟೆಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ನದಿಯ ಒಳ ಹರಿವು ಹೆಚ್ಚಾಗಿದೆ. ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಮೆಟ್ಟಿಲುವರೆಗೆ ನದಿ ನೀರು ಹರಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.