ADVERTISEMENT

ನಾಲೆ ಆಧುನೀಕರಣ: ಅನುದಾನಕ್ಕೆ ಮನವಿ

ಶಾಸಕ ಸಿ.ಎನ್. ಬಾಲಕೃಷ್ಣ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 9:28 IST
Last Updated 16 ಜುಲೈ 2013, 9:28 IST
ಚನ್ನರಾಯಪಟ್ಟಣ ತಾಲ್ಲೂಕು ವಡ್ಡರಹಳ್ಳಿ ಜಾಕ್‌ವೆಲ್ ಬಳಿ ಇರುವ ಹೇಮಾವತಿ ಎಡದಂಡೆ ನಾಲೆಯ ಮೇಲ್ಗಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟಸ್ವಾಮಿ ಇದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ವಡ್ಡರಹಳ್ಳಿ ಜಾಕ್‌ವೆಲ್ ಬಳಿ ಇರುವ ಹೇಮಾವತಿ ಎಡದಂಡೆ ನಾಲೆಯ ಮೇಲ್ಗಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟಸ್ವಾಮಿ ಇದ್ದಾರೆ.   

ಚನ್ನರಾಯಪಟ್ಟಣ: ವಡ್ಡರಹಳ್ಳಿ ಜಾಕ್‌ವೆಲ್ ಬಳಿ ಇರುವ ಹೇಮಾವತಿ ಎಡದಂಡೆ ನಾಲೆಯ ಮೇಲ್ಗಾಲುವೆಯಲ್ಲಿ ಬಿರುಕು ಕಾಣಿಸಿಕೊಂಡ ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರು ಭಾಗದವರ ಒತ್ತಡಕ್ಕೆ ಮಣಿದು ಹೇಮಾವತಿ ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಳ ಮಾಡಿದ್ದರಿಂದ ನಾಲೆಯಲ್ಲಿ ಬಿರುಕು ಕಾಣಸಿಕೊಂಡಿದೆ. ವೈಜ್ಞಾನಿಕವಾಗಿ ನೀರು ಹರಿಸಬೇಕು. ಇದೇ ಸ್ಥಳದಲ್ಲಿ ಸಣ್ಣದಾಗಿ ಬಿರುಕು ಬಿಟ್ಟಿತ್ತು. ಅದನ್ನು ತಾತ್ಕಾಲಿವಾಗಿ ಮುಚ್ಚಲಾಗಿತ್ತು ಎಂದು ಎಂಜಿನಿಯರ್ ತಮ್ಮ ಗಮನಕ್ಕೆ ತಂದಿದ್ದರು. ಶಾಶ್ವತ ಕಾಮಗಾರಿ ಕೈಗೊಂಡಿದ್ದರೆ ಈ ಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದರು.

ನಾಲೆಯಲ್ಲಿ ನೀರು ಹರಿಯುವಾಗ ಸಂಭವಿಸುವ ಅನಾಹುತ ತಪ್ಪಿಸಲು ದೊಡ್ಡಕುಂಚೆ ಕೆರೆಗೆ ನೀರು ಹರಿಸಲು ಗೇಟ್ ನಿರ್ಮಿಸಲಾಗಿತ್ತು. ಆ ಭಾಗದಲ್ಲಿ  ಈಗ ಶಾಶ್ವತವಾಗಿ ಕಾಂಕ್ರೀಟ್ ಗೇಟ್ ನಿರ್ಮಾಣ ಮಾಡಿದ್ದರಿಂದ ಕೆರೆಗೆ ನೀರು ಹರಿಸಲಾಗುತ್ತಿಲ್ಲ. ಅಧಿಕಾರಿಗಳ ಲೋಪ ಇದಕ್ಕೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ನಾಲೆ ಆಧುನೀಕರಣಕ್ಕೆ 7-8 ಕೋಟಿ ರೂಪಾಯಿ ಬಿಡುಗಡೆಯಾಗುತ್ತಿರುವ ಹಣ ಸಾಲುತ್ತಿಲ್ಲ. ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ನೀರಾವರಿ ಸಚಿವರ ಗಮನಕ್ಕೆ ತರಲಾಗುವುದು. ಈ ಭಾಗಕ್ಕೆ ಭೇಟಿ ನೀಡುವಂತೆ ಮನವಿ ಮಾಡಲಾಗುವುದು.

ಕಲಸಿಂಧ, ಚಿಕ್ಕನಾಯಕನಹಳ್ಳಿ, ಜಿ. ರಂಗಾಪುರ, ಮಾಳೇಕೊಪ್ಪಲು, ಚಿಕ್ಕೇನಹಳ್ಳಿ ಗ್ರಾಮದ ಜಮೀನಿನಲ್ಲಿ ನೀರು ಹರಿದಿರುವುದರಿಂದ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಸಾಧ್ಯತೆ ಇದೆ. ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿದ ನಂತರವಷ್ಟೇ ನಷ್ಟದ ಅಂದಾಜು ತಿಳಿಯಲಿದೆ. ಹಾನಿಗೆ ಪರಿಹಾರ ಕೊಡಿಸಲಾಗುವುದು ಎಂದರು.

ನಾಲೆಗೆ ಹೊಸದಾಗಿ ಲೈನಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ನೀರು ಹರಿಸುವ ಮುನ್ನಾ ಕಾಮಗಾರಿ ಕೈಗೊಳ್ಳುವುದು ಬೇಡ. ಕಳಪೆ ಕಾಮಗಾರಿ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.

ಕಲಸಿಂಧ, ಜಿ. ರಂಗಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೋಮವಾರ ಸಹ 4 ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಗ್ರಾಮಸ್ಥರು ಬೇರೆ ಮಾರ್ಗದ ಮೂಲಕ ಊರು ಸೇರಬೇಕಿದೆ. ಪ್ರೌಢಶಾಲೆ, ಕಾಲೇಜುಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು.

ನಾಲೆ ಸಮೀಪವಿರುವ ತೋಟದಲ್ಲಿ ಕೋಳಿ ತ್ಯಾಜ್ಯ ರಾಶಿಗಟ್ಟಲೇ ಇರುವುದರಿಂದ ದುರ್ವಾಸನೆ ಬರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ತಕ್ಷಣ ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು. ತಹಶೀಲ್ದಾರ್ (ಗ್ರೇಡ್-2) ಸೋಮಶೇಖರ್, ಕಾವೇರಿ ನೀರಾವರಿ  ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.