ಹಾಸನ: ಚನ್ನರಾಯಪಟ್ಟಣ ತಾಲ್ಲೂಕು ನಾರಾಯಣಪುರ ಗ್ರಾಮದ ಬಳಿ ಹೇಮಾವತಿ ನಾಲೆ ಒಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅಸಡ್ಡೆಯೇ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.
ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, `ರಾಜಕೀಯ ಒತ್ತಡಕ್ಕೆ ಮಣಿದು ನಾಲೆಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ನೀರು ಹರಿಸಿದ್ದೆೀ ನಾಲೆ ಒಡೆಯಲು ಕಾರಣ. ಯಾರ ಒತ್ತಡದಿಂದ ಈ ಕೃತ್ಯ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು~ ಎಂದರು.
ನಾಲೆ ಒಡೆದಿದ್ದರಿಂದ ಸುಮಾರು 400 ಎಕರೆಗೂ ಹೆಚ್ಚಿನ ಬೆಳೆ ನಷ್ಟವಾಗಿದೆ. ತಹಶೀಲ್ದಾರರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳತಂಡ ರಚಿಸಿ ಸ್ಥಳಪರಿಶೀಲನೆ ನಡೆಸಬೇಕು ಮತ್ತು ರೈತರಿಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ದೇವೇಗೌಡ ಒತ್ತಾಯಿಸಿದರು.
ಇದೇ 16ರಂದು ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಂದು ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು, ಸ್ಥಳಕ್ಕೆ ಬರುವಂತೆ ಅವರನ್ನೂ ವಿನಂತಿಸುತ್ತೇನೆ~ ಎಂದರು.
ಇದಕ್ಕೂ ಮುನ್ನ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ ಗೌಡರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವರು ಚೆನ್ನಾಗಿಟ್ಟಿರಲಿ
`ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಪಕ್ಷ ಬಿಡುತ್ತಿರುವ ಮುಖಂಡರಿಗೆ ದೇವರು ಒಳ್ಳೆಯದು ಮಾಡಲಿ~ ಎಂದು ಶಾಸಕ ಎಚ್.ಡಿ. ರೇವಣ್ಣ ಹಾರೈಸಿದರು.
ಮಾಜಿ ಶಾಸಕ ವಿಶ್ವನಾಥ್ ಹಾಗೂ ಹಾಲಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, `ಪಕ್ಷ ಬಿಡುವವರು ಇಂಥ ಆರೋಪ ಮಾಡುವುದು ಸಾಮಾನ್ಯ.
ಆದರೆ, ಕಳೆದ ಎರಡು ವರ್ಷಗಳಿಂದ ಆ ಇಬ್ಬರು ಮುಖಂಡರು ಯಾರ‌್ಯಾರ ಮನೆಗಳಿಗೆ ಹೋಗಿದ್ದಾರೆ, ಯಾರ‌್ಯಾರಿಗೆ ಮಾಲೆ ಹಾಕಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅವರಾಗಿಯೇ ಪಕ್ಷ ಬಿಡುತ್ತೇವೆ ಎಂದಾಗ ನಾವೇನು ಮಾಡಲು ಸಾಧ್ಯ ? ಎಂದು ಪ್ರಶ್ನಿಸಿದರು.
ಚನ್ನರಾಯಪಟ್ಟಣದಲ್ಲಿ ಹೇಮಾವತಿ ನಾಲೆ ಒಡೆದು ಆಗಿರುವ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಉನ್ನತ ಅಧಿಕಾರಿಗಳ ತಂಡ ರಚಿಸಬೇಕು, ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ರೇವಣ್ಣ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.