ADVERTISEMENT

ನಾಲ್ವರು ಅಸ್ವಸ್ಥ: ಒಬ್ಬರು ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 7:30 IST
Last Updated 10 ಮಾರ್ಚ್ 2011, 7:30 IST

ಹಾಸನ: ಮಂಗಳವಾರದಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ ಕಳೆದು ಕೊಂಡ ಬೋಧಕೇತರ ಸಿಬ್ಬಂದಿಗಳಲ್ಲಿ ಬುಧವಾರ ನಾಲ್ಕು ಮಂದಿ ಅಸ್ವಸ್ಥರಾ ಗಿದ್ದು, ಅವರಲ್ಲಿ ಒಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಆರು ತಿಂಗಳಿಂದ ನಿರುದ್ಯೋಗಿಗಳಾಗಿರುವ ಸಿಬ್ಬಂದಿ ಮಾ.1ರಿಂದ ಪ್ರತಿಭಟನೆ ಆರಂಭಿ ಸಿದ್ದರು. ಇವರ ಬೇಡಿಕೆಗಳ ಬಗೆಗೆ ಯಾರೊಬ್ಬರು ಗಮನ ಹರಿಸಿದ ಕಾರಣಕ್ಕೆ ಮಂಗಳವಾರದಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಎಂಟು ಮಂದಿ ಪುರುಷರು ಹಾಗೂ ಆರು ಜನ ಮಹಿಳೆಯರು ಈ ಉಪವಾಸ ಶುರು ಮಾಡಿದ್ದರು.

ಬುಧವಾರ ಮಧ್ಯಾಹ್ನದ ವೇಳೆಗೆ ಪ್ರತಿಭಟನಾಕಾರರಲ್ಲಿ ಶ್ರೀನಿವಾಸ, ಮಧುಸೂದನ, ಹೊನ್ನೇಗೌಡ ಹಾಗೂ ವೆಂಕಟೇಶ್ ಎಂಬುವರು ಅಸ್ವಸ್ಥಗೊಂಡರು. ಕೂಡಲೇ ಸ್ಥಳಕ್ಕೆ ಬಂದ ಸರ್ಕಾರಿ ಆಸ್ಪತ್ರೆ ವೈದ್ಯರು ಅಸ್ವಸ್ಥರ ಆರೋಗ್ಯ ತಪಾಸಣೆ ನಡೆಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶ್ರೀನಿವಾಸ ಎಂಬುವರನ್ನು ತುರ್ತು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.ಉಪವಾಸ ಆರಂಭಿಸಿದ ಮಹಿಳೆಯರಲ್ಲಿ ಭಾಗ್ಯ ಮತ್ತು ಮಂಜುಳಮ್ಮ ಎಂಬುವರು ಬುಧವಾರ ಸಂಜೆ ವೇಳೆಗೆ ಸುಸ್ತಾಗಿ ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದರು. ಒಟ್ಟು 45 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಮಂಗಳವಾರ ಸುಮಾರು 15 ಮಂದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೆವು. ಬುಧವಾರ ಇನ್ನೂ ಹತ್ತು ಮಂದಿ ಜತೆಯಾಗಿದ್ದಾರೆ. ಇಷ್ಟಾದರೂ ಯಾರೊಬ್ಬರೂ ಭೇಟಿ ಮಾಡಿ ಚರ್ಚೆ ನಡೆಸಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ವರೆಗೂ ಪ್ರತಿಭಟನೆ ಮುಂದುವರೆಯುತ್ತದೆ’ ಎಂದು ಪ್ರತಿಭಟನಾಕಾರರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.