ADVERTISEMENT

ನಾಳೆ ಪೆಟ್ರೋಲ್‌ ಬಂಕ್‌ ಬಂದ್‌

ನ್ಯಾಯಮೂರ್ತಿ ಅಪೂರ್ವ ಚಂದ್ರ ಸಮಿತಿ ವರದಿ ಜಾರಿಗೆ ವಿತರಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:15 IST
Last Updated 11 ಜುಲೈ 2017, 11:15 IST
ನಾಳೆ ಪೆಟ್ರೋಲ್‌ ಬಂಕ್‌ ಬಂದ್‌
ನಾಳೆ ಪೆಟ್ರೋಲ್‌ ಬಂಕ್‌ ಬಂದ್‌   

ಹಾಸನ: ‘ಇಂಧನ ಬೆಲೆ  (ಪೆಟ್ರೋಲ್–ಡೀಸೆಲ್‌) ಪ್ರತಿನಿತ್ಯ ಪರಿಷ್ಕರಣೆ ಪದ್ಧತಿ ಕೈಬಿಡಬೇಕು ಹಾಗೂ ನ್ಯಾಯಾಧೀಶ ಅಪೂರ್ವ ಚಂದ್ರ ಸಮಿತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜುಲೈ 12 ರಂದು ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುವುದು’ ಎಂದು ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಹಂಗಾಮಿ ಅಧ್ಯಕ್ಷ ಎಚ್.ಮಂಜಪ್ಪ, ‘ಜೂನ್ 16ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿತ್ಯದರ ಪರಿಷ್ಕರಣೆ ಪದ್ಧತಿ ಅವೈಜ್ಞಾನಿಕವಾಗಿದೆ. ದೇಶದಾದ್ಯಂತ ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳಾದ ಐಓಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ನ ಸುಮಾರು 5800 ಪೆಟ್ರೋಲ್ ಬಂಕ್‌ಗಳು ಸೇವೆ ಸಲ್ಲಿಸುತ್ತಿದ್ದು, ಇದರಲ್ಲಿ  ಶೇ 40 ರಷ್ಟು  ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿವೆ. 

ಶೇ 74 ರಷ್ಟು ಪೆಟ್ರೋಲ್ ಬಂಕ್‌ಗಳು ಸಂಪೂರ್ಣ ಆಟೋ ಮೆಷನ್ ವ್ಯವಸ್ಥೆಗೆ ಒಳಪಟ್ಟಿಲ್ಲ.  ವಿತರಕರೇ ಪ್ರತಿ ನಿತ್ಯ ಬೆಳಿಗ್ಗೆ 6 ಗಂಟೆಗೆ ದರ ಬದಲಾಯಿಸಬೇಕು. ಇದು ಕಷ್ಟ ಸಾಧ್ಯವಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ವಿತರಕರು ಸುಮಾರು ₹1 ರಿಂದ  ₹ 3 ಲಕ್ಷ ನಷ್ಟ ಅನುಭವಿಸುತ್ತಿದ್ದಾರೆ. ಜುಲೈ 1ರಂದು ರಾಜ್ಯ ಸರ್ಕಾರ ಶೇ5 ರಷ್ಟು ಪ್ರವೇಶ ತೆರಿಗೆ ರದ್ದು ಪಡಿಸಿದ ಪರಿಣಾಮ ಪ್ರತಿ ವಿತರಕ ಲಕ್ಷಾಂತರ ನಷ್ಟ ಅನುಭವಿಸುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‌ಹೊಸ ನೀತಿಯಿಂದ ವಿತರಕರು ಸಂಪೂರ್ಣವಾಗಿ ಹೈರಾಣಾಗಿದ್ದು, ಇದರಿಂದ ಉಂಟಾಗುತ್ತಿರುವ ನಷ್ಟವನ್ನು ಸರ್ಕಾರ ಮತ್ತು ಸರ್ಕಾರ ಸ್ವಾಮ್ಯದ ತೈಲ ಕಂಪನಿಗಳು ತುಂಬಿಕೊಡಬೇಕು.  ನಿತ್ಯ ದರ ಪರಿಷ್ಕರಣೆ ಪದ್ಧತಿ ಕೈ ಬಿಡಬೇಕು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 12 ರಂದು ಇಂಧನ ಖರೀದಿಸುವುದಿಲ್ಲ ಮತ್ತು ಪೆಟ್ರೋಲ್‌ ಬಂಕ್‌ ವ್ಯಾಪಾರ ಬಂದ್‌ ಮಾಡಲಾಗುವುದು. ಆಂಬುಲೆನ್ಸ್‌ ಮತ್ತು ಪೊಲೀಸ್‌ ಇಲಾಖೆ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ ಎಂದರು.

ಪೆಟ್ರೋಲ್ ಬಂಕ್ ವಿತರಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ  ನ್ಯಾಯಮೂರ್ತಿ ಅಪೂರ್ವ ಚಂದ್ರ ಸಮಿತಿ ವರದಿ ಸಲ್ಲಿಸಿದೆ.  ಡೀಲರ್ಸ್‌ ಮಾರ್ಜಿನ್ ಹೆಚ್ಚಿಸುವುದು ಹಾಗೂ ಮಾಸಿಕ ಗೌರವಧನ ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಈವರೆಗೂ ಆ ವರದಿಯನ್ನು ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇ 2.5 ರಷ್ಟು ಕಮಿಷನ್ ನಲ್ಲಿ ಪೆಟ್ರೋಲ್ ಬಂಕ್‌ಗಳನ್ನು ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದ್ದು, ಇದರಿಂದ ವಿತರಕರಗಳು ಕೈಯಿಂದ ನಷ್ಟ ಅನುಭವಿಸುವಂತಾಗಿದೆ. ಎಲ್ಲ ವಸ್ತುಗಳನ್ನು ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ, ಆದರೆ, ಪೆಟ್ರೋಲಿಯಂ ಮಾತ್ರ ಜಿಎಸ್‌ಟಿಗೆ ಸೇರಿಸಿಲ್ಲ ಎಂದು ಆರೋಪಿಸಿದರು.
ಸಂಘದ ಉಪಾಧ್ಯಕ್ಷ ಬಿ.ಪ್ರದೀಪ್ ಕುಮಾರ, ಕಾರ್ಯದರ್ಶಿ ಬಿ.ಎಸ್.ಭಾಸ್ಕರ್ ಇದ್ದರು.

***

ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಹಾಗೂ ತಂತ್ರಾಂಶ ಸೇವೆಗಳ ತೊಂದರೆಯಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ
ಬಿ.ಪ್ರದೀಪ್‌ ಕುಮಾರ್‌, ಪೆಟ್ರೋಲಿಯಂ ವಿತರಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.