ADVERTISEMENT

`ನಿಸರ್ಗ ಶೋಷಣೆಯ ಆರ್ಥಿಕ ನೀತಿ ಅಪಾಯಕಾರಿ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 5:46 IST
Last Updated 1 ಏಪ್ರಿಲ್ 2013, 5:46 IST

ಹಾಸನ: ಜಿಲ್ಲಾಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಾಗ ಭಾನುವಾರ ರಾತ್ರಿ 10 ಗಂಟೆಯಾಗಿತ್ತು. ಅಲ್ಲಿಯವರೆಗೂ ನಗರದ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಕಲಾಭವನದಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು, ಗೋಷ್ಠಿಗಳನ್ನು ಆಸ್ವಾದಿಸಿದರು.

ಗೋಷ್ಠಿಗಳೆಲ್ಲವೂ ವಿಳಂಬವಾಗುತ್ತ, ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಲಂಬಿಸುತ್ತ ಹೋಗಿದ್ದರಿಂದ ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ಸಮಾರೋಪ ಸಮಾರಂಭ ರಾತ್ರಿ 8ಕ್ಕೆ ಆರಂಭವಾಯಿತು. ಇಡೀ ಸಮಾರಂಭಕ್ಕೆ ಕಳಶವಿಟ್ಟಂತೆ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಸ್ಥಿತಿ, ಪ್ರಜಾಪ್ರಭುತ್ವದ ಗಂಡಾಂತರಗಳ ಬಗ್ಗೆ ಸಮುದಾಯ ಪರಿವರ್ತನಾ ಸಮಿತಿಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಮಾತನಾಡಿದರು.

`ರಾಜ್ಯದ ಮಟ್ಟಿಗೆ ಗಣಿ ಲೂಟಿ ಬರಿಯ ಪರಿಸರಕ್ಕೆ ಸಂಬಂಧಿಸಿದ ವಿಚಾರವಲ್ಲ. ಶಾಸಕಾಂಗ, ಕಾರ್ಯಾಂಗ ಗಳೂ ಇದರಲ್ಲಿ ಶಾಮೀಲಾಗಿದ್ದರಿಂದ ನಮ್ಮ ಪ್ರಜಾಪ್ರಭುತ್ವಕ್ಕೇ ಗಂಡಾಂತರ ಬಂದಿತ್ತು. ಆದ್ದರಿಂದ ದೇಶದ ಅತ್ಯು ನ್ನತ ನ್ಯಾಯಾಲಯದ ಮೊರೆ ಹೋಗು ವುದು ಅನಿವಾರ್ಯವಾಯಿತು.

`ಸಂವಿಧಾನವನ್ನು ರಕ್ಷಿಸಬೇಕಾದವರೇ ಅದನ್ನು ಉಲ್ಲಂಘಿಸಿದ್ದರು. ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣದಿಂದ ಬೆರಳೆಣಿಕೆಯಷ್ಟು ಮಂದಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನೇ ನಿಯಂತ್ರಿಸಿದ್ದರು ಎಂದರೆ ನಮ್ಮ ಪ್ರಜಾಪ್ರಭುತ್ವ ಯಾವ ಸ್ಥಿತಿಗೆ ಇಳಿದಿತ್ತು ಎಂಬುದು ಅರ್ಥವಾಗುತ್ತದೆ. ನಮ್ಮ ಸಂವಿಧಾನದಲ್ಲಿ ನಿಜವಾಗಿಯೂ ಶಕ್ತಿ ಇದೆಯೇ ಎಂಬು ದನ್ನು ಪರೀಕ್ಷಿಸಬೇಕಾದ ಸ್ಥಿತಿ ಬಂದಿತ್ತು. ಅಕ್ರಮ ಮಾಡಿದವರು ಜೈಲು ಸೇರಿದ್ದರಿಂದ ಸಂವಿಧಾನ ಇನ್ನೂ ಶಕ್ತಿಯುತವಾಗಿದೆ ಎಂಬುದು ಸಾಬೀತಾಗಿದೆ' ಎಂದು ಹಿರೇಮಠ ಬಣ್ಣಿಸಿದರು.

ಅಕ್ರಮದ ವಿರುದ್ಧದ ಹೋರಾಟಕ್ಕೂ, ಸಾಹಿತ್ಯಕ್ಕೂ ಸಂಬಂಧ ಕಲ್ಪಿಸಿದ ಹಿರೇಮಠ, `ಇಡೀ ಜಿಲ್ಲೆ ಅಕ್ರಮದ ವಿರುದ್ಧ ಮೆಲುದನಿಯಲ್ಲಿ ಮಾತನಾಡಲೂ ಹೆದರುತ್ತಿದ್ದಾಗ ಒಬ್ಬ ವ್ಯಕ್ತಿ ಹೋರಾಡಲು ಹೇಗೆ ಸಾಧ್ಯವಾಯಿತು ಎಂಬುದು ನನಗೂ ಅಚ್ಚರಿಯಾಗಿದೆ. ಆದರೆ ನಮ್ಮ ಸಂಸ್ಕೃತಿ, ಸಾಹಿತ್ಯ ಅಂಥ ಧೈರ್ಯವನ್ನು ಕಟ್ಟಿಕೊಡುವ ಕೆಲಸವನ್ನು ಹಿಂದಿನಿಂದಲೇ ಮಾಡಿದೆ. ಶರಣರು, ಸೂಫಿ ಸಂತರು, ಆಧ್ಯಾತ್ಮಿಕ ಗುರುಗಳು ಕೊಟ್ಟ ಸಂದೇಶಗಳು, ರಚಿಸಿದ ಸಾಹಿತ್ಯ ನನ್ನಲ್ಲಿ ಈ ಧೈರ್ಯ ತುಂಬಿತು ಎಂದರು.

ನಮ್ಮ ಎಲ್ಲ ಯೋಜನೆಗಳೂ ಪ್ರಕೃತಿಯನ್ನು ಶೋಷಿಸುವ ನಿಟ್ಟಿನಲ್ಲೇ ರೂಪಿತವಾಗುತ್ತಿವೆ. ಗುಂಡ್ಯ ಯೋಜನೆ ಇದಕ್ಕೆ ಇನ್ನೊಂದು ನಿದರ್ಶನ. ಮಾಧವ ಗಾಡ್ಗಿಳ್ ಅವರಂಥ ವ್ಯಕ್ತಿ ನೀಡಿದ ವೈಜ್ಞಾನಿಕ ವರದಿಯನ್ನು ಸ್ವೀಕರಿಸಲೂ ಸರ್ಕಾರ ಸಿದ್ಧವಿಲ್ಲ. ಪ್ರಕೃತಿಯ ಶೋಷಣೆ ಮಾಡುವ ಇಂದಿನ ಜಾಗತಿಕ ಆರ್ಥಿಕ ನೀತಿ ಅತ್ಯಂತ ಅಪಾಯಕಾರಿ. ಗುಂಡ್ಯ ವಿರುದ್ಧದ ಹೋರಾಟಕ್ಕೆ ಜೀವಪರವಾಗಿದ್ದು, ಅದಕ್ಕೆ ನಮ್ಮ ಬೆಂಬಲ ಇದೆ ಎಂದರು.

ರಾಜ್ಯದಲ್ಲಿ ನಡೆದ ಅಕ್ರಮಗಳೇನು, ಅದರಲ್ಲಿ ಭಾಗಿಗಳು ಯಾರ‌್ಯಾರು ಎಂಬುದು ಈಗ ನಿಚ್ಚಳವಾಗಿದೆ. ಚುನಾವಣೆಯಲ್ಲಿ ಜನರು ಅಂಥವರಿಗೆ ಸರಿಯಾದ ಪಾಠ ಕಲಿಸಬೇಕು. ಅಂಥ ಶಕ್ತಿ ನಮ್ಮ ಜನರಲ್ಲಿದೆ, ಹಿಂದೆ ಜನರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ' ಎಂದು ಮನವಿ ಮಾಡಿಕೊಂಡರು.
ಸಮಾರೋಪ ಭಾಷಣ ಮಾಡಬೇಕಿದ್ದ ಚಿತ್ರ ನಿರ್ದೇಶಕ ನಾಗಾಭರಣ ಕಾರ್ಯಕ್ರಮ ತುಂಬ ವಿಳಂಬವಾದ ಹಿನ್ನೆಲೆಯಲ್ಲಿ, `ಒಳ್ಳೆಯ ಕೆಲಸವಾಗಿದೆ. ಇಂಥ ಕೈಂಕರ್ಯಗಳು ಇನ್ನೂ ನಡೆಯುತ್ತಿರಲಿ' ಎಂಬ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಘಟಕದ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿಯನ್ನು ಸನ್ಮಾನಿಸಲಾಯಿತು. ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ, ಡಾ. ಮುನಿವೆಂಕಟೇಗೌಡ ಮುಂತಾದ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.

ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡೋಣ
`ಹಾಸನ ಜಿಲ್ಲಾ ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರಯತ್ನ ಮಾಡಬೇಕು, ಅದಕ್ಕೆ ಆದಿಚುಂಚನಗಿರಿ ಮಠದಿಂದ ಎಲ್ಲ ಸಹಕಾರ ನೀಡಲು ಸಿದ್ಧ' ಎಂದು ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ ನುಡಿದರು.

ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶಿರ್ವಚನ ನೀಡಿದ ಅವರು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಬೇಕು. ನಾವು ಹೊರ ರಾಜ್ಯ, ಹೊರ ದೇಶಗಳಿಗೆ ಹೊದಾಗ ನಮ್ಮ ನೆಲ-ಜಲದ ಮಹತ್ವವೇನು ಎಂಬುದು ಅರಿವಾಗುತ್ತದೆ. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಇದರ ಬೀಜ ಬಿತ್ತಬೇಕು' ಎಂದರು.

ಈ ಪ್ರಸ್ತಾವನೆಯನ್ನು ಬೆಂಬಲಿಸಿದ ಕೇಂದ್ರ ಪರಿಷತ್ತಿನ ಗೌರವ ಕಾರ್ಯದರ್ಶಿ `ಜಿಲ್ಲಾ ಸಂಘದಿಂದ ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿದರೆ ಅದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT