ADVERTISEMENT

ನೆಹರು ವೃತ್ತ: ಹತ್ತಾರು ಕಟ್ಟಡ ನೆಲಸಮ ಸಂಭವ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2011, 5:15 IST
Last Updated 11 ಅಕ್ಟೋಬರ್ 2011, 5:15 IST

ಬೇಲೂರು: ಪಟ್ಟಣದ ಮುಖ್ಯ ರಸ್ತೆಯಿಂದ ಹಳೇಬೀಡು ರಸ್ತೆಗೆ ಸಂಪರ್ಕ ಕಲ್ಪಿಸುವ ನೆಹರು ನಗರದ ವೃತ್ತವನ್ನು ನೇರಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಧರಿ ಸಿದ್ದು, ಇದಕ್ಕಾಗಿ ಬುಧವಾರ ಸರ್ವೆ ಕಾರ್ಯ ನಡೆಸಲಿದೆ. ಇದರಿಂದಾಗಿ ಹತ್ತಾರು ಕಟ್ಟಡಗಳು ನೆಲಸಮಗೊಳ್ಳಲಿವೆ.

ಮಂಗಳೂರಿನಿಂದ- ತಮಿಳು ನಾಡಿನ ತಿರುವ ಣ್ಣಾಮಲೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬೇಲೂರು- ಹಳೇಬೀಡು ಮೂಲಕ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದ ಜೆ.ಪಿ.ನಗರದ ಸೀಮೆ ಎಣ್ಣೆ ಬಂಕ್ ಬಳಿಯಿಂದ ಬಾಣಾವರದ ವರೆಗಿನ 46.58 ಕಿ.ಮೀ. ರಸ್ತೆಯನ್ನು 137.87 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಾಗಿದೆ. ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣ ಗೊಂಡಿದ್ದು, ಬೆಂಗಳೂರಿನ ಜಿ.ವಿ.ಆರ್. ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿ ಶೇ23.66ರಷ್ಟು ಕಡಿ ಮೆಗೆ ಕಾಮಗಾರಿ ಗುತ್ತಿಗೆ ಪಡೆದಿದೆ.

147.97ನೇ ಕಿ.ಮೀ.ನಿಂದ 194.55 ಕಿ.ಮೀ. ವರೆಗಿನ 7 ಮೀಟರ್ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದ್ದು, ಎರಡು ಬದಿಯಲ್ಲಿ ತಲಾ 2.5 ಮೀಟರ್ ಕಾಲುದಾರಿ ನಿರ್ಮಾಣವಾಗಲಿದೆ. 250 ಮಿ.ಮೀ. ಜಲ್ಲಿ, ಅದರ ಮೇಲೆ 140 ಮಿ.ಮೀ.ನ 2 ಲೇಯರ್ ಡಾಂಬರೀಕರಣ ಅದರ ಮೇಲ್ಬಾಗದಲ್ಲಿ 50 ಮಿ.ಮೀ. ಡಾಂಬರ್ ಹಾಕಲು ಯೋಜನೆ ರೂಪಿಸಲಾಗಿದೆ.

ರಸ್ತೆಯ ಎರಡೂ ಬದಿಯಲ್ಲಿ 1ಮೀಟರ್ ಚರಂಡಿ ನಿರ್ಮಾಣವಾಗಲಿದೆ. ಈ ವ್ಯಾಪ್ತಿ ಯಲ್ಲಿ ಒಟ್ಟು 52 ಕಿರು ಸೇತುವೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೇಲೂರು ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಮಾಡಲು ಕಟ್ಟಡ ಒಡೆಯುವ ಕೆಲಸ ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೈಗೆತ್ತಿ ಕೊಂಡಿಲ್ಲವಾದರೂ ಪಟ್ಟಣ ವ್ಯಾಪ್ತಿ ಯಲ್ಲಿ ಎರಡೂ ಬದಿಯ ಚರಂಡಿ ವರೆಗೆ ಡಾಂಬರೀಕರಣ ಮಾಡಲಾ ಗುತ್ತದೆ. 46.58 ಕಿ.ಮೀ. ವ್ಯಾಪ್ತಿ ಯಲ್ಲಿ ಒಟ್ಟು 2300 ಮರಗಳು ಧರೆಗುರುಳಲಿವೆ. ಇವುಗಳನ್ನು ಕಡಿಯಲು ಇದೇ ತಿಂಗಳ 21ರಂದು ಟೆಂಡರ್ ಕರೆಯಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸ ಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಸನ ವೃತ್ತದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಎಸ್.ಪಿ.ಅನಂತರಾಜು `ಪ್ರಜಾವಾಣಿ~ಗೆ ತಿಳಿಸಿದರು.

ನೆಹರು ನಗರ ವೃತ್ತ ಅಗಲೀಕರಣ: ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ವೃತ್ತದಲ್ಲಿನ ರಸ್ತೆಗಳು ನೇರವಾಗಿರಬೇಕೆಂಬ ಕಾರಣದಿಂದ ಬೇಲೂರು ಪಟ್ಟಣದ ಮುಖ್ಯ ರಸ್ತೆಯಿಂದ ಹಳೇಬೀಡು ರಸ್ತೆವರೆಗಿನ ರಸ್ತೆಯನ್ನು ನೇರಗೊಳಿಸಲು ನಿರ್ಧರಿಸಲಾ ಗಿದೆ. ಇದರಿಂದಾಗಿ ಹಲವು ಕಟ್ಟಡಗಳು ಹಾಗೂ ಖಾಲಿ ನಿವೇಶನಗಳು ರಸ್ತೆಗೆ ಆಹುತಿಯಾಗಲಿವೆ. ಚಿಕ್ಕಮಗಳೂರು ವೃತ್ತ ದಿಂದ ಹಾಸನ ರಸ್ತೆಯ ಕಡೆಗೆ 60 ಮೀಟರ್ ಮತ್ತು ನೆಹರು ನಗರ ಮಸೀದಿ ಪಕ್ಕದಿಂದ 160 ಮೀಟರ್ ಉದ್ದಕ್ಕೆ ರಸ್ತೆಯನ್ನು ನೇರಗೊಳಿಸಲು ರಾಷ್ಟ್ರೀ ಯ ಹೆದ್ದಾರಿ ಇಲಾಖೆ ನಿರ್ಧರಿಸಿದೆ. ಇದಕ್ಕೃ ಸೋಮವಾರ ಪ್ರಾಥಮಿಕ ಸಮೀಕ್ಷೆ ನಡೆಸಿದ್ದು, ಬುಧವಾರದಿಂದ ಸರ್ವೆ ನಡೆಯಲಿದೆ.

ಹಳೇಬೀಡು ರಸ್ತೆಯಲ್ಲಿರುವ ಎರಡು ಸಾಮಿಲ್ ಗಳಿಗೆ ಸೇರಿದ ಬಹುತೇಕ ಜಾಗ ಬಳಕೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.