ADVERTISEMENT

ಪಿಡಿಓ, ಗ್ರಾಪಂ ಕಾರ್ಯದರ್ಶಿ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 7:15 IST
Last Updated 28 ಫೆಬ್ರುವರಿ 2011, 7:15 IST

ಚನ್ನರಾಯಪಟ್ಟಣ: ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿರುವ ವಿಶೇಷ ಘಟಕ ಯೋಜನೆ ಅನುದಾನವನ್ನು ಗ್ರಾಪಂ ಸಿಬ್ಬಂದಿಗೆ ವೇತನ ನೀಡಲು ಬಳಸಿಕೊಂಡಿರುವ ಜಿನ್ನೇನಹಳ್ಳಿ, ಗುಲಸಿಂದ ಗ್ರಾಪಂ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.ಪರಿಶಿಷ್ಟಜಾತಿ/ವರ್ಗದ ಅಭಿವೃದ್ಧಿಗೆ ಮೀಸಲಿರುವ ಶೇ. 22.75 ಅನುದಾನ ಬಳಕೆ ಮಾಡುವ ಕುರಿತು ಈಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಮುಖಂಡರು, ಜನಾಂಗದ ಪ್ರಗತಿಗೆ ಬಳಸುವ ಹಣವನ್ನು ಸಿಬ್ಬಂದಿಗೆ ವೇತನ ನೀಡಲು ಉಪಯೋಗಿಸಿಕೊಂಡಿರುವುದು ಸರಿಯಲ್ಲ. ಪಿಡಿಒ, ಗ್ರಾಪಂ ಕಾರ್ಯದರ್ಶಿಯನ್ನು ಅಮಾನತ್ತು ಮಾಡದಿದ್ದರೆ ತಾಪಂ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜುಟ್ಟನಹಳ್ಳಿ ಗ್ರಾಪಂ ದಾಖಲೆ ಸುಟ್ಟು ಮೂರು ವರ್ಷಗಳಾಗಿದೆ. ತಪ್ಪೆಸಗಿದ ಕಾರ್ಯದರ್ಶಿಗೆ ಪಿಡಿಒ ಆಗಿ ಬಡ್ತಿ ನೀಡಲಾಗಿದೆ. ಈ ಬಡ್ತಿ ರದ್ದುಪಡಿಸಬೇಕು. ತಾಲ್ಲೂಕಿನ 40 ಗ್ರಾಪಂಗಳಲ್ಲಿ ಕಂಪ್ಯೂಟರ್ ಆಪರೇಟರ್, ಬಿಲ್‌ಕಲೆಕ್ಟರ್ ನೇಮಕಕ್ಕೆ ರೋಸ್ಟರ್ ಪದ್ದತಿ ಅನುಸರಿಸಿಲ್ಲ. ಇದರಿಂದ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.ಜಿ.ಪಂ. ಉಪಕಾರ್ಯದರ್ಶಿ ಮಾತನಾಡಿ, ಸಭೆಗೆ ಅಪೂರ್ಣ ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಸಿ.ಎಸ್. ಪುಟ್ಟೇಗೌಡ, ತಾಪಂ ಅಧ್ಯಕ್ಷೆ ವಿಜಯ, ತಾಪಂ ಇಓ ಕೆ.ಬಿ. ನಿಂಗರಾಜಪ್ಪ, ದಲಿತ ಮುಖಂಡರಾದ ಬಿ. ರಂಗಪ್ಪ, ಎನ್.ಬಿ. ಮಂಜಣ್ಣ, ಆಲದಹಳ್ಳಿ ವೆಂಕಟೇಶ್, ಕೆ.ಎನ್. ನಾಗೇಶ್, ಲಕ್ಷ್ಮಣ್, ರಂಗಸ್ವಾಮಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.