ADVERTISEMENT

ಪುರಸಭಾಧ್ಯಕ್ಷೆ ಪತಿ ಮೇಲೆ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 17:20 IST
Last Updated 2 ಫೆಬ್ರುವರಿ 2011, 17:20 IST
ಪುರಸಭಾಧ್ಯಕ್ಷೆ ಪತಿ ಮೇಲೆ ಕ್ರಮಕ್ಕೆ ಆಗ್ರಹ
ಪುರಸಭಾಧ್ಯಕ್ಷೆ ಪತಿ ಮೇಲೆ ಕ್ರಮಕ್ಕೆ ಆಗ್ರಹ   

ಚನ್ನರಾಯಪಟ್ಟಣ: ಪಟ್ಟಣದ ಶ್ರೀದೇವಿ ನಗರದಲ್ಲಿ ಕೊಳವೆ ಬಾವಿಯ ಮೋಟಾರನ್ನು ಬೇರೆಡೆಗೆ ಸ್ಥಳಾಂತರಿಸುವ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಇಲಿಯಾಜ್ ಎಂಬುವವರ ಮೇಲೆ ಪುರಸಭಾಧ್ಯಕ್ಷೆ ಭಾಗ್ಯಮ್ಮ ಅವರ ಪತಿ ನಾಗರಾಜು ಹಲ್ಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.

ಬಡಾವಣೆಯ ಜನತೆ ಇದನ್ನು ಖಂಡಿಸಿ ಪೊಲೀಸ್ ಠಾಣೆಗೆ ಧಾವಿಸಿ ನಾಗರಾಜ್ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ ಅರ್ಪಿಸಿದರು.

ಕೆಲ ದಿನಗಳಿಂದ ದುರಸ್ತಿಯಲ್ಲಿದ್ದ ಕೊಳವೆ ಬಾವಿಯ ಮೋಟಾರನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಬೆಳಿಗ್ಗೆ ನಾಗರಾಜು ಬಂದಿದ್ದರು. ಆದರೆ, ಇಲಿಯಾಜ್ ಸೇರಿದಂತೆ ಬಡಾವಣೆಯ ಜನತೆ ವಿರೋಧ ವ್ಯಕ್ತಪಡಿಸಿ, ನಾಗರಾಜು ಜೊತೆ ಮಾತಿನ ಚಕಮಕಿ ನಡೆಸಿದರು. ಅಲ್ಲಿಂದ ಹೊರಟ ನಾಗರಾಜು ‘ಇನ್ನೆಂದೂ  ನಿಮ್ಮ ಬಡಾವಣೆಯತ್ತ ಬರುವುದಿಲ್ಲ’ ಎಂದರು.

ಆದರೆ, ಮಧ್ಯಾಹ್ನ ಇಲಿಯಾಜ್‌ಗೆ ಮೊಬೈಲ್ ಮೂಲಕ ಸಂಪರ್ಕಿಸಿ ಧಮಕಿ ಹಾಕಿದ್ದಾರೆ. ಅಲ್ಲದೆ ನಂತರ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲಿಯಾಜ್ ಮಾತನಾಡಿ, ‘ತಮ್ಮ ಮೇಲೆ ಪುರಸಭೆಯ ಅಧ್ಯಕ್ಷೆಯ ಪತಿ ಹಲ್ಲೆ ಮಾಡಿದ್ದಾರೆ’ ಎಂದರು. ಇದೇ ವೇಳೆ ನಾಗರಾಜು ಸಹ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡಿವೈಎಸ್‌ಪಿ ಭೇಟಿ: ವಿಷಯ ತಿಳಿದ ಕೂಡಲೇ ಡಿವೈಎಸ್‌ಪಿ ಕೆ. ಪರಶುರಾಂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ನೆರದಿದ್ದ ಬಡಾವಣೆಯ ಜನತೆ ವಿನಾ ಕಾರಣ ಇಲಿಯಾಜ್ ಮೇಲೆ ನಾಗರಾಜು ಮತ್ತು ಅವರ ತಂಡ ಹಲ್ಲೆ ಮಾಡಿದ್ದಾರೆ.

ನಾಗರಾಜು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಡಿವೈಎಸ್‌ಪಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.