ADVERTISEMENT

ಪೆಟ್ರೋಲ್‌, ಡೀಸೆಲ್ ದರ ಇಳಿಕೆಗೆ ಆಗ್ರಹ

ಕೇಂದ್ರ ಸರ್ಕಾರಕ್ಕೆ ಒತ್ತಾಯ; ಹೇಮಾವತಿ ವೃತ್ತದಲ್ಲಿ ಸಿಪಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:09 IST
Last Updated 26 ಮೇ 2018, 13:09 IST

ಹಾಸನ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಎಂ ಸ್ಥಳೀಯ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಗರದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.

‘ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಪರೀತ ಅಬಕಾರಿ ಸುಂಕ ವಿಧಿಸಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚಾಗುತ್ತಿದೆ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನವ ಉದಾರೀಕರಣ ನೀತಿಗಳೇ ಕಾರಣವಾಗಿವೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾದರೆ ಸಹಜವಾಗಿ ಇಲ್ಲಿಯೂ ದರಗಳು ಹೆಚ್ಚಳವಾಗುತ್ತವೆ. ಆದರೆ, 2014ರಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್‌ಗೆ 105.50 ಡಾಲರ್‌ ಇತ್ತು. ಇದು 2018ರಲ್ಲಿ ಒಂದು ಬ್ಯಾರಲ್‌ 55.71 ಡಾಲರ್‌ಗೆ ಇಳಿಯಿತು. ಅಂದರೆ ಈ ನಾಲ್ಕು ವರ್ಷದಲ್ಲಿ ಸುಮಾರು ಅರ್ಧದಷ್ಟು ಕಚ್ಚಾತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ನಾಲ್ಕು ವರ್ಷದ ಹಿಂದೆ ಪೆಟ್ರೋಲ್ ಲೀಟರ್‌ಗೆ ₹ 72.26 ಇತ್ತು. ಈಗ ಅದು ₹ 77.48 ಕ್ಕೆ ಏರಿಕೆಯಾಗಿದೆ. ಡೀಸೆಲ್ ಲೀಟರ್‌ಗೆ ₹ 55.48 ಇದ್ದಿದ್ದು, ಈಗ ₹ 69.52ಕ್ಕೆ ಏರಿಕೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಇಂಧನ ದರ ಇಷ್ಟೊಂದು ಏರಿಕೆಯಾಗಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ. ಏಕೆಂದರೆ, ಕೇಂದ್ರ ಸರ್ಕಾರ ವಿಧಿಸುತ್ತಿರುವ ವಿಪರೀತ ಅಬಕಾರಿ ಸುಂಕ. ಕಚ್ಚಾ ತೈಲವನ್ನು ಸಂಸ್ಕರಿಸಿದ ನಂತರ ಪೆಟ್ರೋಲ್ ಲೀಟರ್ ಗೆ ₹ 35.21 ಹಾಗೂ ಡೀಸೆಲ್ ಲೀಟರ್ ಗೆ ₹ 37.24ಕ್ಕೆ ಲಭ್ಯವಾಗುತ್ತದೆ. ಆದರೆ, ಕೇಂದ್ರ ಸರ್ಕಾರ ವಿಧಿಸುವ ಸುಂಕ, ಡೀಲರ್ ಕಮಿಷನ್ ಮತ್ತು ರಾಜ್ಯ ಸರ್ಕಾರದ ವ್ಯಾಟ್ ಸೇರಿದಂತೆ ಪೆಟ್ರೋಲ್‌ ಲೀಟರ್ ಗೆ ಶೇಕಡಾ 214 ರಷ್ಟು ಹಾಗೂ ಡೀಸೆಲ್ ಶೇಕಡಾ 174 ರಷ್ಟು ಹೆಚ್ಚಿನ ಹಣವನ್ನು ಜನ ಸಾಮಾನ್ಯರು ಪಾವತಿಸುವಂತಾಗಿದೆ’ ಎಂದು ಟೀಕಿಸಿದರು.

ಸಿಪಿಐಎಂ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್, ಎಂ.ಜಿ. ಪೃಥ್ವಿ, ಮುಬಶೀರ್‌ ಅಹಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.