ADVERTISEMENT

ಪೊಲೀಸ್‌ ವಾಹನ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:55 IST
Last Updated 6 ಜೂನ್ 2017, 6:55 IST
ಕಾರಿನ ಚಾಲಕನನ್ನು ಸಂಚಾರ ಪೊಲೀಸ್ ಠಾಣೆ ವಾಹನದ ಚಾಲಕ ಥಳಿಸಿದ್ದಾರೆ ಎಂದು ಆರೋಪಿಸಿ ಕುಟುಂಬದವರು, ಸಾರ್ವಜನಿಕರು ಚನ್ನರಾಯಪಟ್ಟಣದಲ್ಲಿ ಸೋಮವಾರ ಸಂಚಾರ ಠಾಣೆಯ ವಾಹನ ತಡೆದು ಪ್ರತಿಭಟನೆ ನಡೆಸಿದರು
ಕಾರಿನ ಚಾಲಕನನ್ನು ಸಂಚಾರ ಪೊಲೀಸ್ ಠಾಣೆ ವಾಹನದ ಚಾಲಕ ಥಳಿಸಿದ್ದಾರೆ ಎಂದು ಆರೋಪಿಸಿ ಕುಟುಂಬದವರು, ಸಾರ್ವಜನಿಕರು ಚನ್ನರಾಯಪಟ್ಟಣದಲ್ಲಿ ಸೋಮವಾರ ಸಂಚಾರ ಠಾಣೆಯ ವಾಹನ ತಡೆದು ಪ್ರತಿಭಟನೆ ನಡೆಸಿದರು   

ಚನ್ನರಾಯಪಟ್ಟಣ: ಸಂಚಾರ ಠಾಣೆಯ ವಾಹನದ ಚಾಲಕ, ಕಾರಿನ ಚಾಲಕನನ್ನು ಥಳಿಸಿದರು ಎಂದು ಆರೋಪಿಸಿ ಚಾಲಕನ ಕುಟುಂಬದವರು ಮತ್ತು ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಎದುರು ಕಾರನ್ನು ನಿಲ್ಲಿಸಿದ ಶಿವರಾಜು ಮತ್ತವರ ಕುಟುಂಬದವರು ಆಸ್ಪತ್ರೆಗೆ ದಾಖಲಾಗಿದ್ದ ತಂದೆಯ ಆರೋಗ್ಯ ವಿಚಾರಿಸಲು ತೆರಳುತ್ತಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಸಂಚಾರಠಾಣೆಯ ಪೊಲೀಸರು, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕನನ್ನು ಕರೆದು ದಾಖಲೆ ಕೇಳಿದರು. ದಾಖಲೆ ತಂದು ತೋರಿಸುವಷ್ಟರಲ್ಲಿ ಮಾತಿನ ಚಕಮಕಿ ನಡೆದು ಸಂಚಾರ ಠಾಣೆಯ ವಾಹನದ ಚಾಲಕ, ಕಾರಿನ ಚಾಲಕ ಶಿವರಾಜು ಅವರನ್ನು ಥಳಿಸಿದರು ಎಂದು ಕುಟುಂದದವರು ಆಕ್ರೋಶ ವ್ಯಕ್ತಪಡಿಸಿದರು. ಸಂಚಾರ ಠಾಣೆಯ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ಅನಗತ್ಯವಾಗಿ ಕಾರಿನ ಚಾಲಕನನ್ನು ಥಳಿಸಿದ ಸಂಚಾರ ಠಾಣೆಯ ವಾಹನದ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

‘ಕಾರಿನ ಅಗತ್ಯ ದಾಖಲೆ ಇಲ್ಲದಿದ್ದರೆ, ದಂಡ ವಿಧಿಸಲಿ. ಅದನ್ನು ಬಿಟ್ಟು ಹಲ್ಲೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕುಟುಂಬದವರು, ಸಾರ್ವಜನಿಕರು ಪ್ರಶ್ನಿಸಿದರು. ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. ರಸ್ತೆ ತಡೆಯಿಂದಾಗಿ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪಟ್ಟಣದ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ರಸ್ತೆ ತಡೆ ತೆರವುಗೊಳಿಸುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಸಂಚಾರ ಠಾಣೆಯ ಚಾಲಕ ತಪ್ಪು ಮಾಡಿದ್ದರೆ ಅವರ ವಿರುದ್ದ ದೂರು ನೀಡಿದರೆ ದಾಖಲಿಸಲಾಗುವುದು ಎಂದು ಹೇಳಿದ ಬಳಿಕ ರಸ್ತೆ ತಡೆ ತೆರವುಗೊಳಿಸಲಾಯಿತು.
ಘಟನೆಯಲ್ಲಿ ಗಾಯಗೊಂಡಿರುವ ಕಾರಿನ ಚಾಲಕ ಶಿವರಾಜು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.