ADVERTISEMENT

ಪ್ರವಾಸಿ ತಾಣದತ್ತ ಹರದನಹಳ್ಳಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 7 ಮೇ 2012, 5:55 IST
Last Updated 7 ಮೇ 2012, 5:55 IST
ಪ್ರವಾಸಿ ತಾಣದತ್ತ ಹರದನಹಳ್ಳಿ ಗ್ರಾಮ
ಪ್ರವಾಸಿ ತಾಣದತ್ತ ಹರದನಹಳ್ಳಿ ಗ್ರಾಮ   

ಹೊಳೆನರಸೀಪುರ: ಹಿಂದೆ ಹರದನಹಳ್ಳಿ ಗ್ರಾಮ ಒಂದು ಪುಟ್ಟ ಗ್ರಾಮ. ಗ್ರಾಮದ ತುಂಬ ನಾಡ ಹೆಂಚಿನ ಮನೆಗಳು, ಗುಂಡಿ ಬಿದ್ದ ರಸ್ತೆಗಳು. ಎಲ್ಲ ಹಳ್ಳಿಗಳಂತೆ ಇದೂ ಒಂದು ಹಳ್ಳಿ ಎನ್ನುವಂತಿತ್ತು. 15 ವರ್ಷಗಳ ಹಿಂದೆ ಈ ಹಳ್ಳಿಗೆ ಹೋಗಿದ್ದವರು ಈಗ ಹೋದರೆ ಇದು ಹರದನಹಳ್ಳಿಯೇ ಅಲ್ಲ ಎನ್ನುತ್ತಾರೆ. ಈ ಹಳ್ಳಿ ಇಂದು ಯಾವುದೇ ನಗರಕ್ಕೆ ಕಡಿಮೆ ಇಲ್ಲದಂತೆ ಬೆಳೆದು ಉತ್ತಮ ಪ್ರವಾಸಿ ತಾಣ ಆಗುವುದರಲ್ಲಿದೆ.

ಇದು ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು. 125 ಮನೆಗಳು. ಸುಮಾರು 600 ಜನಸಂಖ್ಯೆ ಇರುವ ಗ್ರಾಮ. ಗೌಡರು ಪ್ರಧಾನಿ ಆಗಿದ್ದಾಗ ಮತ್ತು ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಈ ಗ್ರಾಮಕ್ಕೆ ದ್ವಿಪಥ ರಸ್ತೆ, ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆ, ಮೊರಾರ್ಜಿ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ದೊರಕಿಸಿಕೊಟ್ಟರು.

ಗ್ರಾಮದ ಜನರಿಗಾಗಿ 80 ಆರ್‌ಸಿಸಿ ಮನೆಗಳನ್ನೂ ಕಟ್ಟಿಸಿಕೊಟ್ಟರು. ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳಿದ್ದವು. ಈಗ  ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಕೆಲಸ ನಡೆಯುತ್ತಿದೆ. ಇಷ್ಟೇ ಆಗಿದ್ದರೆ ಇದು ಪ್ರವಾಸಿ ತಾಣ ಆಗುತ್ತಿರಲಿಲ್ಲ.
 
ಗ್ರಾಮದಲ್ಲಿದ್ದ ಹಳೆಯ ಈಶ್ವರ ದೇವಾಲಯವನ್ನು ತೆರವುಗೊಳಿಸಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಈಶ್ವರ, ಗಣಪತಿ, ಆಂಜನೇಯ, ಕಾಲಭೈರವ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ.

ಅಮೃತಶಿಲೆಗಳನ್ನು ಬಳಸಿ ಕಟ್ಟಿರುವ ದೇವಾಲಯ ಮತ್ತು ಹೊರಾಂಗಣ ಅದ್ಭುತವಾಗಿದೆ. ದೇವಾಲಯ ಇತ್ತೀಚೆಗೆ ಲೋಕಾರ್ಪಣೆಗೊಂಡಿದ್ದು, ಪ್ರತಿ ದಿನ ದೇವಾಲಯ ನೋಡಲು ನೂರಾರು ಜನರು ಆಗಮಿಸುತ್ತಿದ್ದಾರೆ.

ದೇವಾಲಯದ ಹೊರಭಾಗದಲ್ಲಿ ಸಾವಿರಾರು ಜನರು ಕುಳಿತು ವೀಕ್ಷಿಸಲು ಮೆಟ್ಟಲುಗಳನ್ನು ನಿರ್ಮಿಸುವ ಕಾರ್ಯ ಭರದಿಂದ ನಡೆದಿದೆ. ಹಾಸನ ಮೈಸೂರು ರಸ್ತೆಯ ಹಳೇಕೋಟೆಯಲ್ಲಿ ಇಳಿದರೆ ಇಲ್ಲಿಗೆ ಹೋಗಲು ಆಟೊಗಳು ಸಿಗುತ್ತವೆ. ಹಳೇಕೋಟೆ ಪಕ್ಕದಲ್ಲಿ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟ ಇದೆ. ಊರಲ್ಲಿ ವೆಂಕಟೇಶ್ವರನ ದೇವಾಲಯವೂ ಇದೆ. ಈ ಎಲ್ಲ ದೇವಾಲಯಗಳನ್ನು ಅಭಿವೃದ್ಧ ಪಡಿಸಲಾಗಿದ್ದು, ಪ್ರವಾಸಿ ತಾಣದಂತಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.