ADVERTISEMENT

ಬಡ್ತಿ ಹಣಕ್ಕಾಗಿ ನಿವೃತ್ತ ನೌಕರನ ಸಂಗ್ರಾಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:05 IST
Last Updated 3 ಜೂನ್ 2011, 6:05 IST

ಹೊಳೆನರಸೀಪುರ: ತಾಲ್ಲೂಕಿನ ಹೆತ್ತಗೌಡನಹಳ್ಳಿಯ ಶಿಕ್ಷಣ ಇಲಾಖೆ ನಿವೃತ್ತ ನೌಕರ ಶಿವನಂಜೇಗೌಡ ತಮ್ಮ ವೇತನ ಬಡ್ತಿ ವ್ಯತ್ಯಾಸ ಸರಿಪಡಿಸಿಕೊಳ್ಳಲು ಮೈಸೂರು ವಿಭಾಗೀಯ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ 1993ರಿಂದ ನೂರಾರು ಪತ್ರ ಬರೆದು, ಹಲವಾರು ಬಾರಿ ಅಲೆದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನು ಕೂಡಾ ನ್ಯಾಯದೊರಕಿಸಿಕೊಳ್ಳಲಾರದೆ ತೊಳಲಾಡುವಂತಾಗಿದೆ ಎಂದು ಅವರು      ದೂರಿದ್ದಾರೆ.

ಶಿವನಂಜೇಗೌಡರು 1958 ಮಾ.10ರಂದು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಗುಮಾಸ್ತರಾಗಿ ಸೇವೆಗೆ ಸೇರಿದ್ದರು. ಇವರಿಗೆ 1973 ಆ.3ರಂದು  ಕೆಸಿಎಸ್‌ಆರ್ ನಿಯಮದಂತೆ ವೇತನ ನಿಗದಿಯಾಯಿತು. ನಂತರ 2009 ಮೇ 26ರಂದು ಶಿಕ್ಷಣ ಇಲಾಖೆ ಆಯುಕ್ತರು ಇವರಿಗೆ ವೇತನ ನಿಗದಿಗೊಳಿಸಿದ ನಂತರ ಸೇವಾವಧಿ ಪೂರ್ಣವಿದ್ದ ವಾರ್ಷಿಕ ವೇತನ ಬಡ್ತಿ ಏಪ್ರಿಲ್‌ನಿಂದಲೇ ನೀಡಬೇಕು ಎಂದು ಆದೇಶಿಸಿದ್ದರು. 

 ಆದರೆ ಇವರು ಬಡ್ತಿ ಪಡೆದ ದಿನದಿಂದ ವೇತನ ಬಡ್ತಿಮೊತ್ತವನ್ನು ನೀಡಿದ್ದಾರೆ. ಕೆಲಸಕ್ಕೆ ಸೇರಿದ ದಿನದಿಂದ ಬಡ್ತಿ ಹೊಂದಿದ ದಿನದವರೆಗೆ ಏಪ್ರಿಲ್‌ನಿಂದ ನೀಡಬೇಕಾಗಿದ್ದ ಇಂಕ್ರಿಮೆಂಟ್ ನೀಡಿಲ್ಲ.

ಇದೇ ರೀತಿ ಬಡ್ತಿ ಹೊಂದಿದ ಕೆಲವರಿಗೆ ಅವರು ಸೇವೆಗೆ ಸೇರಿದ ದಿನದಿಂದ ಪೂರ್ವಾನ್ವಯವಾಗುವಂತೆ ಕೆಸಿಎಸ್‌ಆರ್ ನಿಯಮದಂತೆ ಇಂಕ್ರಿಮೆಂಟ್ ನೀಡಿದ್ದಾರೆ. ಆದರೆ ಶಿವನಂಜೇಗೌಡರಿಗೆ ನೀಡಿಲ್ಲ. ಇವರು ನಿವೃತ್ತಿಯಾದ ದಿನದಿಂದ ಈ ಬಗ್ಗೆ ಮೈಸೂರು ವಿಭಾಗದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನೂರಾರು ಪತ್ರ ಬರೆದಿದ್ದಾರೆ. ಆದರೆ ಸೂಕ್ತ ಉತ್ತರ ದೊರೆತಿಲ್ಲ.

 ಅನ್ಯಾಯದ ಕುರಿತು ಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ತಿಳಿಸಿರುವ ಅವರು ಮೈಸೂರಿನ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಎಂದು ಎಚ್ಚರಿಸಿದ್ದಾರೆ.

ಅಧೀಕ್ಷಕರಾಗಿ ನಿವೃತ್ತಿ ಹೊಂದಿದ ಇವರು ಅನ್ಯಾಯವಾದಾಗ ಕರ್ನಾಟಕ ನ್ಯಾಯಮಂಡಳಿಯಲ್ಲಿ ದಾವೆ ಹೂಡಿ ನ್ಯಾಯ ಪಡೆದ್ದ್ದಿದೇನೆ. ಈಗಲೂ ಹೋರಾಡುತ್ತೇನೆ ಎಂದು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.