ಹಾಸನ: `ಮೂತ್ರಕೋಶದ ಕ್ಯಾನ್ಸರ್‌ಗೆ ಒಳಗಾ ದವರಿಗೆ ಬದಲಿ ಮೂತ್ರಕೋಶ ಜೋಡಿಸುವ ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ಈಗ ಹಾಸನದ ಮಂಗಳ ಆಸ್ಪತ್ರೆಯಲ್ಲೂ ಮಾಡಲಾಗುತ್ತಿದ್ದು, ಈಗಾಗಲೇ ಮೂವರಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗಿದೆ' ಎಂದು ವೈದ್ಯ ಡಾ. ನಿರಂಜನ್ ಜೆ. ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, `ಮೂತ್ರಕೋಶದ ಟಿ.ಬಿ. ಅಥವಾ ಕ್ಯಾನ್ಸರ್‌ಗೆ ಒಳಗಾದ ರೋಗಿಗಳಿಗೆ ಅನೇಕ ಸಂದರ್ಭದಲ್ಲಿ ಮೂತ್ರಕೋಶವನ್ನೇ ತೆಗೆಯಬೇಕಾಗುತ್ತದೆ. ಇಂಥವರು ಚಿಕಿತ್ಸೆ ಬಳಿಕ ಯಾವಾಗಲೂ ಮೂತ್ರದ ಬ್ಯಾಗನ್ನು ಕಟ್ಟಿಕೊಂಡೇ ಓಡಾಡಬೇಕು. ಈಚೆಗೆ ಇದಕ್ಕೆ `ನಿಯೋಬ್ಲಾಡರ್ ರಿಕನ್‌ಸ್ಟ್ರಕ್ಷನ್' ಎಂಬ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಇದಕ್ಕೆ ತಜ್ಞ ವೈದ್ಯರ ತಂಡವೇ ಬೇಕಾಗುತ್ತದೆ. ಈಚಿನವರೆಗೂ ಈ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತಿತ್ತು. ಈಗ ಹಾಸನದಲ್ಲಿ ಇದು ಲಭ್ಯ ಎಂದರು.
`ಈ ಶಸ್ತ್ರ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಅಥವಾ ಟಿ.ಬಿಗೆ ಒಳಗಾದ ಮೂತ್ರಕೋಶದ ಜಾಗದಲ್ಲಿ ಬದಲಿ ಚೀಲವನ್ನು ಅಳವಡಿಸಬೇಕಾಗುತ್ತದೆ. ರೋಗಿಯ ಕರುಳಿನಿಂದ ಸುಮಾರು 40ಸೆಂ.ಮೀ. ಉದ್ದದ ಭಾಗವನ್ನು ತೆಗೆದು ಅದನ್ನು ಮೂತ್ರಕೋಶದೊಳಗೆ ಅಳವಡಿಸಿ ಅಲ್ಲಿ ಮೂತ್ರ ಸಂಗ್ರಹವಾಗುವಂತೆ ಮಾಡಲಾಗುವುದು. ಹೀಗೆ ಮಾಡಿದರೂ ಕೆಲವೊಮ್ಮೆ ಪೈಪ್ ಮೂಲಕ ಮೂತ್ರ ತೆಗೆಯಬೇಕಾಗುತ್ತದೆ. ಆದರೆ ಸದಾ ಮೂತ್ರದ ಚೀಲ ಹೊತ್ತುಕೊಂಡು ತಿರುಗಾಡುವ ಪ್ರಮೇಯ ತಪ್ಪುತ್ತದೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು ಒಂಬತ್ತು ಗಂಟೆ ಬೇಕಾಗುತ್ತದೆ ಎಂದು ತಿಳಿಸಿದರು.
`ಬೆಂಗಳೂರಿನಲ್ಲಿ ಈ ಚಿಕಿತ್ಸೆಗೆ ನಾಲ್ಕರಿಂದ ಐದು ಲಕ್ಷ ರೂಪಾಯಿ ವೆಚ್ಚ ಬರುತ್ತಿದೆ. ಹಾಸನದಲ್ಲಿ ಇದನ್ನು 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಲಾಗುತ್ತಿದೆ' ಎಂದರು.
ಪತ್ರಿಕಾಗೋಷ್ಠಿಯಲ್ಲಿದ್ದ ಡಾ. ಅಶೋಕ ಗೌಡ ಮಾತನಾಡಿ, `ಮಂಗಳ ಆಸ್ಪತ್ರೆಯಲ್ಲಿ ಇನ್ನೂ ಒಂದೆರಡು ತಿಂಗಳಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಆರಂಭವಾಗಲಿದೆ. ಜತೆಗೆ ನರರೋಗ ತಜ್ಞರನ್ನೂ ಕರೆಯಿಸಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ' ಎಂದರು.
ಅರಿವಳಿಕೆ ತಜ್ಞ ಡಾ. ಬಾಲಕೃಷ್ಣ, ಮೂತ್ರಕೋಶದ ಚಿಕಿತ್ಸೆ ಪಡೆದ ಭಾರತಿ ಹಾಗೂ ಹರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.