ADVERTISEMENT

ಬಸ್ ನಿಲುಗಡೆ ನಿಷೇಧ: ಜನರಿಗೆ ತೀವ್ರ ತೊಂದರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:11 IST
Last Updated 15 ಜೂನ್ 2013, 6:11 IST

ಸಕಲೇಶಪುರ: ಪಟ್ಟಣದಲ್ಲಿ ಟ್ರ್ಯಾಫಿಕ್ ಜಾಮ್ ಸಮಸ್ಯೆ ನಿವಾರಣೆಗಾಗಿ, ಹಳೆ ಬಸ್ ನಿಲ್ದಾಣದಲ್ಲಿ ನಿಲುಗಡೆ ನಿಷೇಧ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಉಂಟಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತೀರಾ ಕಿಷ್ಕಿಂಧೆಯಾಗಿದ್ದು, ವಾಹನಗಳ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ದೇಶದ ಎಲ್ಲಾ ಊರುಗಳಲ್ಲಿ ಒಡೆದು ವಿಸ್ತರಣೆ ಮಾಡುತ್ತಿದ್ದರೆ, ಇಲ್ಲಿ ಮಾತ್ರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ಹೇಳಿಕೊಂಡು 20 ವರ್ಷಗಳಿಂದ ರಸ್ತೆ ವಿಸ್ತರಣೆಯನ್ನು ನೆನೆಗುದಿಗೆ ತಳ್ಳಿದ್ದಾರೆ.

ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ವ್ಯಾಪಾರ ವಹಿವಾಟುಗಳು, ಬ್ಯಾಂಕ್‌ಗಳು ಸೇರಿದಂತೆ ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುವುದು ಬಿ.ಎಂ ರಸ್ತೆಯಲ್ಲಿ. ಹೀಗಾಗಿ ನಿತ್ಯ ಗ್ರಾಮೀಣ ಪ್ರದೇಶಗಳಿಂದ ರೈತರು, ಕೂಲಿ, ಕಾರ್ಮಿಕರು, ಬಡವರು ತಮ್ಮ ವ್ಯವಹಾರಗಳಿಗಾಗಿ ಬರಬೇಕು. ಹೊಸ ಬಸ್ ನಿಲ್ದಾಣ ಇಲ್ಲಿಂದ 2 ಕಿ,ಮೀ. ದೂರದಲ್ಲಿರುವುದರಿಂದ, ಹೋಗಿ ಬರುವುದಕ್ಕೆ 40 ರೂಪಾಯಿ ಆಟೋ ಬಾಡಿಗೆ ಕೊಡಬೇಕು. ಆಟೋ ಬಾಡಿಗೆ ನೀಡಲು ಶಕ್ತಿ ಇಲ್ಲದ ಕುಟುಂಬ ಗಳ ರೋಗಿಗಳು, ಗರ್ಭಿಣಿಯರು, ಮಕ್ಕಳು ನಿಲ್ದಾಣದಿಂದ ಪೇಟೆಗೆ ನಡೆದುಕೊಂಡು ಬರಬೇಕಾದ ಕಷ್ಟದ ಸ್ಥಿತಿ ಇದೆ.

`ಸ್ಟೇಟ್ ಬ್ಯಾಂಕ್ ಮುಂಭಾಗದ ಬಿ.ಎಂ.ರಸ್ತೆಯಲ್ಲಿ ಬಸ್ಸು ನಿಲ್ಲುವ ವ್ಯವಸ್ಥೆ ಮಾಡಲಾಗಿದ್ದರೂ, ಪ್ರಯಾಣಿಕರು ರಸ್ತೆ ಬದಿ, ಅಂಗಡಿಗಳ ಮುಂದೆ ನಿಲ್ಲಬೇಕು. ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ರೋಗಿಗಳು, ಮಕ್ಕಳನ್ನು ಎತ್ತಿಕೊಂಡು ನಿಲ್ಲುವ ಮಹಿಳೆಯರಿಗೆ ನರಕ ಯಾತನೆಯಾಗಿದೆ. ಅಂಗಡಿಗಳ ಮುಂದೆ ನಿಂತರೆ ಅಂಗಡಿಯವರ ವ್ಯಾಪಾರಕ್ಕೆ ತೊಂದರೆ ಆಗಿ ಅವರಿಂದ ಬೈಗುಳ ಕೇಳಬೇಕು. ಮಳೆಯ ಆಶ್ರಯಕ್ಕೆ ಸೂರು ಇಲ್ಲ, ಯಾವ ಊರಿನಲ್ಲಿಯೂ ಇಂತಹ ಕೆಟ್ಟ ವ್ಯವಸ್ಥೆ ಇಲ್ಲ' ಎಂದು ಇಲ್ಲಿಯ ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಅರ್ಪಿತ `ಪ್ರಜಾವಾಣಿ'ಗೆ ಹೇಳಿದರು.

`ಹಳೆ ಬಸ್ ನಿಲ್ದಾಣದಲ್ಲಿ ನಿಷೇಧ ಮಾಡಿ ಗ್ರಾಮೀಣ ಜನರನ್ನು ರಸ್ತೆಗೆ ತಳ್ಳಿ, ಆ ಸ್ಥಳದಲ್ಲಿ ಹಣ ಇರುವ ಶ್ರೀಮಂತರ ಕಾರುಗಳು ನಿಲ್ಲುವುದಕ್ಕೆ ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥೆಗೆ ಧಿಕ್ಕಾರವಿರಲಿ' ಎಂದು ದಲಿತ ಮುಖಂಡ ಮೀಸೆ ಮಂಜಯ್ಯ ಅಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.