ADVERTISEMENT

ಬಿಗಿ ಕ್ರಮ; ಗುರಿಮುಟ್ಟಲಾಗದ ಅಬಕಾರಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:54 IST
Last Updated 2 ಜನವರಿ 2014, 6:54 IST

ಹಾಸನ: ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದರ ಪರಿಣಾಮ ಅಬಕಾರಿ ಇಲಾಖೆಯ ಮೇಲಾಗುತ್ತಿದೆ.

ಕುಡಿದು ವಾಹನ ಓಡಿಸುವವರನ್ನು ಪೊಲೀಸರು ಹಿಡಿದು ಸಾವಿರ – ಎರಡು ಸಾವಿರ ರೂಪಾಯಿ ದಂಡ ವಿಧಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಮದ್ಯ ವಹಿವಾಟೇ ಕಡಿಮೆಯಾಗಿದೆ. ಈ ವರ್ಷ ಹೊಸ ವರ್ಷಾಚರಣೆಯಂದೂ ಸಹ ನಿರೀಕ್ಷೆಗಿಂದ ಕಡಿಮೆ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಉಪ ಅಧೀಕ್ಷಕ ಬಿ.ವಿ. ಹೂವಪ್ಪಗೌಡ ತಿಳಿಸಿದ್ದಾರೆ.

ಕಳೆದ ವರ್ಷಕ್ಕಿಂತ ಶೇ 5ರಷ್ಟು ಹೆಚ್ಚುವರಿ ಮದ್ಯ ಮಾರಾಟದ ಗುರಿಯನ್ನು ಜಿಲ್ಲೆಗೆ ನೀಡಲಾಗಿತ್ತು. ಅದರಂತೆ ಒಂಬತ್ತು ತಿಂಗಳಲ್ಲಿ (ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ) 17,17,463 ಕೇಸ್‌ ಮದ್ಯ ಮಾರಾಟ ಆಗಬೇಕಾಗಿತ್ತು. ಆದರೆ ಈ ವರೆಗೆ 15,49,991 ಕೇಸ್‌ ಮಾತ್ರ ಮಾರಾಟವಾಗಿದೆ. ಅಂದರೆ ನಿಗದಿತ ಗುರಿಯಲ್ಲಿ ಶೇ 92ರಷ್ಟು ಮಾತ್ರ ಸಾಧನೆ ಆಗಿದೆ. ವಿಶೇಷವಾಗಿ ಹಾಸನದಲ್ಲಿ ಮದ್ಯ ಮಾರಾಟದಲ್ಲಿ ಭಾರಿ ಕುಸಿತ ಉಂಟಾಗಿದೆ. ನಗರಕ್ಕೆ ನೀಡಿರುವ ಗುರಿಯಲ್ಲಿ ಶೇ 76ರಷ್ಟು ಮಾತ್ರ ಸಾಧನೆ ಆಗಿದೆ.

ಜಿಲ್ಲೆಯಲ್ಲೇನೂ ಕುಡಿಯುವವರ ಸಂಖ್ಯೆ ಕಡಿಮೆ ಆಗಿಲ್ಲ. ಆದರೆ ಸಂಜೆ ಕುಡಿದು ವಾಹನ ಓಡಿಸುವವರ ಮೇಲೆ ಪೊಲೀಸರು ದೂರು ದಾಖಲಿಸುವುದರಿಂದ ಹೆಚ್ಚು ಕುಡಿಯಲೂ ಜನರು ಹೆದರುವಂತಾಗಿದೆ.

ಕುಡಿದು ವಾಹನ ಓಡಿಸಿದರೆ ಪೊಲೀಸರು ಎರಡು ಸಾವಿರ ರೂಪಾಯಿವರೆಗೂ ದಂಡ ಹಾಕಿ, ವಾಹನವನ್ನು ಸ್ವಾಧೀನಪಡಿಸಿಕೊಂಡು ಮುಂದೆ ಹೋಗುವಂತೆ ಸೂಚಿಸಿದ್ದೂ ಇದೆ. ರಾತ್ರಿ ವೇಳೆಯಲ್ಲಿ ವಾಹನ ಕಸಿದುಕೊಂಡರೆ ಮನೆಯವರೆಗೆ ನಡೆದುಕೊಂಡೇ ಹೋಗಬೇಕಾಗುತ್ತಿದೆ. ದೂರ ದೂರದಿಂದ ನಗರಕ್ಕೆ ಬಂದ ನೂರಾರು ಜನರು ಇಂಥ ಪೇಚಿಗೆ ಸಿಲುಕಿದ್ದು ಇದೆ.

ಇದೂ ಅಲ್ಲದೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯವನ್ನು ವಾಹನದಲ್ಲಿ ಸಾಗಿಸಿದರೆ ಅಂಥವರ ಮೇಲೂ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. 2013ನೇ ಸಾಲಿನಲ್ಲಿ ಪೊಲೀಸರು ಕುಡಿದು ವಾಹನ ಚಲಾಯಿಸುತ್ತಿದ್ದ 1,613 ಮಂದಿಯ ವಿರುದ್ಧ ದೂರು ದಾಖಲಿಸಿ 16,77,450 ರೂಪಾಯಿ ದಂಡ ಪಡೆದಿದ್ದಾರೆ. ಕಳೆದ ವರ್ಷ 531 ಜನರ ವಿರುದ್ಧ ದೂರು ದಾಖಲಿಸಿ 8,13,750 ರೂಪಾಯಿ ಮಾತ್ರ ಸಂಗ್ರಹಿಸಲಾಗಿತ್ತು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಅತಿಹೆಚ್ಚು ಮದ್ಯ ಮಾರಾಟ ಮಾಡುವ ಜಿಲ್ಲೆಗಳಲ್ಲಿ ಹಾಸನ ಆರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬೆಂಗಳೂರು ಇದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ತುಮಕೂರು ಇವೆ. ಆರನೇ ಸ್ಥಾನ ಹಾಸನದ್ದು. ಮದ್ಯ ಮಾರಾಟದ ಮೂಲಕ ಹಾಸನ ಜಿಲ್ಲೆ ಪ್ರತಿ ವರ್ಷ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ನೀಡುತ್ತದೆ ಎಂದು ಹೂವಪ್ಪಗೌಡ ತಿಳಿಸಿದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರಂದು ದೊಡ್ಡ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಬಹುದು ಎಂದು ಅಬಕಾರಿ ಇಲಾಖೆ ನಿರೀಕ್ಷಿಸಿತ್ತು. ಆದರೆ ಹೊಸವರ್ಷದಂದು ಜಿಲ್ಲೆಯಲ್ಲಿ 12,391 ಕೇಸ್‌ಗಳಷ್ಟು ಮದ್ಯ ಮಾತ್ರ ಮಾರಾಟವಾಗಿದೆ. ಪ್ರತಿ ದಿನದ ಮಾರಾಟಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೇ.

ಪೊಲೀಸ್‌ ಇಲಾಖೆಯ ಕಠಿಣ ಕ್ರಮ ಒಂದು ಕಾರಣವಾದರೆ, ಇತ್ತೀಚೆಗೆ ಮದ್ಯದ ದರ ಹೆಚ್ಚಾಗಿರುವುದು ಮತ್ತು ಈ ವರ್ಷವೂ ಜಿಲ್ಲೆಯಲ್ಲಿ ಬೆಳೆ ನಷ್ಟವಾಗಿರುವುದು  ಮಾರಾಟ ಕುಸಿತಕ್ಕೆ ಕಾರಣ, ಆಲೂಗೆಡ್ಡೆ ಬೆಳೆಗಾರರು ನಷ್ಟ ಅನುಭವಿಸಿದ್ದು ಒಂದಾದರೆ, ಬೇಲೂರು, ಸಕಲೇಶಪುರ ಭಾಗದ ಕಾಫಿ ಬೆಳೆಗಾರರು ಸಹ ಈ ವರ್ಷ ಬೆಳೆ ನಷ್ಟ ಅನುಭವಿಸಿದ್ದಾರೆ. ಇದೂ ಮಾರಾಟದ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ಇಲಾಖೆಯ ಇತರ ಅಧಿಕಾರಿಗಳು ನುಡಿಯುತ್ತಾರೆ.

‘ಇಲಾಖೆಗೆ ನೀಡಿರುವ ಗುರಿ ಸಾಧಿಸಬೇಕಾದರೆ ಜಿಲ್ಲೆಯಲ್ಲಿ ಪ್ರತಿದಿನ 8,672 ಕೇಸ್‌ ಮದ್ಯ ಮಾರಾಟ ಮಾಡಬೇಕು. ಅಂದರೆ ಪ್ರತಿದಿನ 3,36,000 ಜನರು ಕನಿಷ್ಠ ಒಂದು ಕ್ವಾರ್ಟರ್‌ ಮದ್ಯ ಕುಡಿಯಬೇಕಾಗುತ್ತದೆ. ಆದರೆ ಆ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ’ ಎಂದು ಹೂವಪ್ಪ ಗೌಡ ನುಡಿದಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿಯೇ 2.08 ಲಕ್ಷ ಕೇಸ್‌ ಮದ್ಯ ಮಾರಾಟದ ಗುರಿ ಇತ್ತು. 1.75 ಲಕ್ಷ ಕೇಸ್‌ಗಳು ಮಾತ್ರ ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.