ADVERTISEMENT

`ಬಿಜೆಪಿ ಸಖ್ಯದಿಂದಲೇ ಜೆಡಿಎಸ್‌ಗೆ ಸೋಲು'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:51 IST
Last Updated 2 ಸೆಪ್ಟೆಂಬರ್ 2013, 5:51 IST

ಹಾಸನ: `ಜೆಡಿಎಸ್‌ನಲ್ಲಿ ಎಚ್.ಡಿ. ದೇವೇಗೌಡರೇ ಪರಮೋಚ್ಚ ನಾಯಕ. ಶಾಸಕರ ಅಭಿಪ್ರಾಯ ಪಡೆದು ಅವರೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈ ವಿಚಾರದಲ್ಲಿ ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ  ಭಿನ್ನಾಭಿಪ್ರಾಯ ಬಂದಿದೆ ಎಂಬುದು ಮಾಧ್ಯಮಗಳ ಸೃಷ್ಟಿ' ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ನುಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ನಮ್ಮ ಕಡೆಯವರೇ ಅಧ್ಯಕ್ಷರಾಗಬೇಕು ಎಂದು ನಾನು ಮತ್ತು ಕುಮಾರಸ್ವಾಮಿ ಹಟ ಹಿಡಿದಿದ್ದೇವೆ ಎಂದು ಮಾಧ್ಯಮಗಳು ಬಿಂಬಿಸಿವೆ. ಈಚೆಗೆ ಪಕ್ಷದ ಶಾಸಕರ ಸಭೆ ನಡೆಸಿದಾಗ ಎಲ್ಲರೂ ಕುಮಾರಸ್ವಾಮಿ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದರು. ಆ ಬಗ್ಗೆ ಅಂತಿಮ ತೀರ್ಮಾನವನ್ನು ದೇವೇಗೌಡರು ಕೈಗೊಳ್ಳಬೇಕಾಗಿದೆ. ಬಿಜೆಪಿ ಜತೆ ಸಖ್ಯ ಬೆಳೆಸಿದ್ದರಿಂದ ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ ಎಂಬುದು ನಿಜ. ಆದರೆ ದೇವೇಗೌಡರು ಬಿಜೆಪಿ ಜತೆ ಮೈತ್ರಿ ಮಾಡಿರಲಿಲ್ಲ. ಬಿಜೆಪಿಗೆ ಅಲ್ಲಿ ಸಮರ್ಥ ಅಭ್ಯರ್ಥಿ ಇರಲಿಲ್ಲ. ನಾವು ಮಾಡದಿದ್ದರೆ ಕಾಂಗ್ರೆಸ್‌ನವರು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದರು. ಡಿ.ಕೆ. ಶಿವಕುಮಾರ್ ಈ ಬಗ್ಗೆ ಬಿಜೆಪಿಯವರ ಮನೆಬಾಗಿಲಿಗೂ ಹೋಗಿ ಬಂದಿದ್ದರು  ಎಂದರು.

ರೈತರ ಕಡೆ ಗಮನ ಕೊಡಿ:
ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದ ರೇವಣ್ಣ, `ಒಂದು ರೂಪಾಯಿಗೆ ಅಕ್ಕಿ, ಕ್ಷೀರ ಭಾಗ್ಯ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಕೊಚ್ಚಿಕೊಳ್ಳುವ ಸರ್ಕಾರ, ರೈತರ ಕಡೆಗೂ ಗಮನ ಕೊಡಬೇಕು. ಜಿಲ್ಲೆಯಲ್ಲಿ 30 ರಿಂದ 40 ಲಕ್ಷ ತೆಂಗಿನ ಮರಗಳು ಸತ್ತಿವೆ. ಕೇಂದ್ರದ ತಂಡ ಬಂದು ಅಧ್ಯಯನ ನಡೆಸಿ ಹೋಗಿದೆ. ರಾಜ್ಯದಿಂದ ಕೇಂದ್ರಕ್ಕೆ ಒಂದು ವರದಿ ಸಲ್ಲಿಸುವಂತೆ ಹೇಳಿದ್ದರೂ, ಸರ್ಕಾರ ಇನ್ನೂ ಆ ಕೆಲಸ ಮಾಡಿಲ್ಲ. ಹಳ್ಳಿ ಮೈಸೂರು, ಕೆ.ಆರ್. ಪೇಟೆ ಭಾಗಗಳಿಗೆ ನಾಲೆಗಳ ಮೂಲಕ ನೀರು ಹರಿಯುತ್ತಿಲ್ಲ. ನೀರು ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಗಿಮಿಕ್ ರಾಜಕಾರಣ ಬಿಟ್ಟು ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು' ಎಂದು ಅವರು ಒತ್ತಾಯಿಸಿದರು.

ಕೆಇಬಿ ವಿರುದ್ಧ ಪ್ರತಿಭಟನೆ:
ಅನೇಕ ಗ್ರಾಮಗಳಲ್ಲಿ ಕೆಟ್ಟಿರುವ ಟಿ.ಸಿ.ಗಳನ್ನು ಸರಿಮಾಡಿಸಲೂ ಕೆಇಬಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ರೈತರೇ ಕೈಯಿಂದ ಹಣಕೊಟ್ಟು, ದುರಸ್ತಿ ಮಾಡಿಸಿ ತಂದರೆ ಅದನ್ನು ಅಳವಡಿಸಲು ಕನಿಷ್ಠ 5 ರಿಂದ 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ. ಸ್ವಲ್ಪ ದಿನ ಕಾಯ್ದು ನೋಡುತ್ತೇವೆ ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.

ಭಯ ಬೇಡ:
ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಹಾಸನ ಹಾಗೂ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದಾಗುವ ಸನ್ನಿವೇಶ ಬಂದಿರುವುದನ್ನು ಪತ್ರಿಕೆಗಳ ಮೂಲಕ ಅರಿತ ದೇವೇಗೌಡರು ಕೇಂದ್ರದ ಸಚಿವರ ಜತೆಗೆ ಮಾತುಕತೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲೇ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಹೇಳಿದರು.

ಐಎಂಎ ಮಾನದಂಡದಂತೆ ಸೌಲಭ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹಾಸನದ ವೈದ್ಯಕೀಯ ಕಾಲೇಜಿನ ಮಾನ್ಯತೆಯೂ ರದ್ದಾಗುವ ಅಪಾಯ ಇದೆ. ಸರ್ಕಾರ ಆ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ರೇವಣ್ಣ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.