ADVERTISEMENT

ಬುದ್ಧಿವಂತಿಕೆ, ಸಾಮರ್ಥ್ಯ ಪರೀಕ್ಷಿಸಿದ ‘ಕುರುಕ್ಷೇತ್ರ’

ನೌಕರಿ, ಉದ್ಯೋಗ ಕೈಗೊಳ್ಳಲು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:50 IST
Last Updated 31 ಮಾರ್ಚ್ 2018, 9:50 IST

ಹಳೇಬೀಡು: ಕುರುಕ್ಷೇತ್ರ ಎಂದಾಕ್ಷಣ ಮಹಾಭಾರತದ ಯುದ್ಧ ನೆನಪಾಗುವುದು ಸಹಜ. ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿಯೂ ಗುರುವಾರ ಕುರುಕ್ಷೇತ್ರ ನಡೆಯಿತು. ಗಾಬರಿಯಾಗಬೇಡಿ, ‘ಕುರುಕ್ಷೇತ್ರ’ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಬುದ್ಧಿವಂತಿಕೆಯ ಸಾಮರ್ಥ್ಯ ಪರೀಕ್ಷಿಸುವ (ವಾರ್‌ ಬಿಟ್ವೀನ್‌ ಇಂಟೆಲಿಜೆನ್ಸ್‌) ಒಂದು ಕಾರ್ಯಕ್ರಮ. ವಿದ್ಯಾರ್ಥಿಗಳಿಗಾಗಿ ಲೆಕ್ಕಾಚಾರ, ವ್ಯವಹಾರದಲ್ಲಿ ಆಕರ್ಷಣೆ, ಮಾರುಕಟ್ಟೆಯ ತಂತ್ರಗಾರಿಕೆ ಹಾಗೂ ಸ್ಪರ್ಧೆ ಸಜ್ಜಾಗುವುದು. ಮೊದಲಾದ ವಿಚಾರಗಳನ್ನು ವಿವಿಧ ಟಾಸ್ಕ್‌ಗಳ ಮುಖಾಂತರ ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿಗಳಿಗಾಗಿ ಕೌಶಲ ವೃದ್ಧಿಸುವ ಕಾರ್ಯ ನಡೆಯಿತು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಲ್ಲದೆ, ಮಾರುಕಟ್ಟೆ, ಕಂಪನಿ, ಸರ್ಕಾರದ ಆಳಕ್ಕೆ ಇಳಿದು ಜ್ಞಾನಾರ್ಜನೆ ಸಂಪಾದಿಸಿಕೊಂಡರು. ಬಿ.ಕಾಂ, ಎಂ.ಕಾಂ ಓದಿದ ನಂತರ ಕಂಪನಿ ಕೆಲಸದ ಸಂದರ್ಶನಕ್ಕೆ ತೆರಳಿದಾಗ ಮಾಲೀಕರೊಂದಿಗೆ ನಡೆದುಕೊಳ್ಳಬೇಕಾದ ನೀತಿ, ನಿಯಮಗಳನ್ನು ಆಟಗಳ ಮುಖಾಂತರ ವಿದ್ಯಾರ್ಥಿಗಳು ಅರಿತುಕೊಂಡರು.ಕಂಪನಿ ಸೇರಿದ ನಂತರ ಕೆಲಸ ನಿರ್ವಹಿಸುವ ಚತುರತೆಯ ಬಗ್ಗೆಯೂ ವಿದ್ಯಾರ್ಥಿಗಳು ತಿಳಿದುಕೊಂಡರು, ಸ್ವಂತ ಕಂಪನಿ ನಡೆಸುವ ನಿಯಮ, ಸ್ವಂತ ವ್ಯವಹಾರ ಕೈಗೊಂಡಾಗ ವೃದ್ಧಿಸಿದ ಬಂಡವಾಳವನ್ನು ಕ್ರೋಡೀಕರಿಸಿಕೊಂಡು ಲಾಭಾಂಶ ಸಂಪಾದಿಸುವ ಜಾಣಾತನವನ್ನು ಆಟಗಳಿಂದಲೇ ಕಲಿತೇವು ಎಂಬ ಮಾತು ವಿದ್ಯಾರ್ಥಿಗಳಿಂದ ಕೇಳಿ ಬಂತು.

ರಸಪ್ರಶ್ನೆ ಕಾರ್ಯಕ್ರಮದ ಮುಖಾಂತರ ವ್ಯವಹಾರ ಕ್ಷೇತ್ರ, ಪ್ರಸ್ತುತ ವಿದ್ಯಮಾನದ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು. ಚಿತ್ರಕಲೆಯಲ್ಲಿ ಪ್ರಕೃತಿಗೆ ಹಾನಿಕಾರಕವಾಗದಂತೆ ವ್ಯವಹಾರ ನಡೆಸುವ ಕಲೆ ತಿಳಿಸಲಾಯಿತು. ಚರ್ಚಾ ಸ್ಪರ್ಧೆಯಲ್ಲಿ ಜಿಎಸ್‌ಟಿ ಬೇಕು, ಬೇಡ ಎಂಬ ಎರಡೂ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಟ್ರಝರ್‌ ಹಂಟ್‌ (ನಿಧಿ ಹುಡುಕುವ ಆಟ) ಮನಸ್ಸಿಗೆ ಹಿತ ನೀಡುವುದರೊಂದಿಗೆ ಜ್ಞಾನಾರ್ಜನೆಯನ್ನು ಕಲ್ಪಿಸಿತು ಎಂದು ವಿದ್ಯಾರ್ಥಿ ಅನಿಲ್‌ ತಿಳಿಸಿದರು. ಮಾಕ್‌ಪ್ರೆಸ್‌ ಎಂಬ ಟಾಸ್ಕ್‌ ಮುಖಾಂತರ ಆಡುವ ಆಟದಲ್ಲಿ ಗ್ರಾಹಕ, ಬೃಹತ್‌ ಬಂಡವಾಳಶಾಹಿ ಹಾಗೂ ದೇಶದ ಪ್ರಧಾನಮಂತ್ರಿ, ವಿವಿಧ ಉನ್ನತ ಸ್ಥಾನದ ವ್ಯಕ್ತಿಯೊಂದಿಗೆ ನಡೆಸುವ ಮಾತುಕತೆಯನ್ನು ವಿದ್ಯಾರ್ಥಿಗಳು ನಿರ್ವಹಿಸಿದರು.

ADVERTISEMENT

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಾಣಿಜ್ಯೋತ್ಸವ ಕಾರ್ಯಕ್ರಮದಡಿ ಬಿ.ಕಾಂ ವಿದ್ಯಾರ್ಥಿಗಳು ಪ್ರಾಚಾರ್ಯ ಪ್ರೊ.ಎಸ್‌.ನಾರಾಯಣ್‌, ಸಹಾಯಕ ಪ್ರಾಧ್ಯಾಪಕರಾದ ಶಂಕರರೆಡ್ಡಿ, ಡಿ.ಕೆ. ಜಗದೀಶ್‌. ಎಸ್‌.ಜಿ.ರೇಖಾ ಸಹಕಾರ ದಿಂದ ಎಂ.ಕಾಂ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ನಡೆಸಿದರು.‘ಕಾರ್ಯಕ್ರಮದಿಂದ ವ್ಯವಸ್ಥಾಪನೆ ನಿರ್ವಹಣೆ, ಕಾರ್ಯಕ್ಷೇತ್ರದ ಜವಾಬ್ದಾರಿಯ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಯಿತು’ ಎಂದು ಬಿ.ಕಾಂ ವಿದ್ಯಾರ್ಥಿ ಆಕಾಶ್‌ ಹೇಳಿದರು.

‘ಅಂತರ ಕಾಲೇಜು ವಾಣಿಜ್ಯೋತ್ಸವ ನಡೆಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರ ಅಗತ್ಯ’ ಎಂಬುದು ಎಂಕಾಂ ವಿದ್ಯಾರ್ಥಿ ಆರ್‌.ಎಸ್‌.ಅನಿಲ್‌ ಅಭಿಮತ.

**

ವಿದ್ಯಾರ್ಥಿಗಳಲ್ಲಿ ವ್ಯವಹಾರದ ಪ್ರಾಯೋಗಿಕ ಜ್ಞಾನ ಹೆಚ್ಚಿಸಬೇಕು. ಉದ್ಯೋಗ, ವ್ಯವಹಾರ ಕೈಗೊಂಡಾಗ ಧೈರ್ಯವಾಗಿ ನಿಭಾಯಿಸಬೇಕು ಎಂಬು ದನ್ನು ‘ಕುರುಕ್ಷೇತ್ರ’ದಲ್ಲಿ ತಿಳಿಸಲಾಯಿತು –ಶಂಕರರೆಡ್ಡಿ, ಸಂಯೋಜಕರು ಎಂ.ಕಾಂ ವಿಭಾಗ.

ಎಚ್‌.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.