ADVERTISEMENT

ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಲಿ– ರೇವಣ್ಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 7:19 IST
Last Updated 15 ಅಕ್ಟೋಬರ್ 2017, 7:19 IST

ಹಾಸನ: ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು. ಈ ವರ್ಷ ಮೆಕ್ಕೆಜೋಳದ ಫಸಲು ಉತ್ತಮವಾಗಿದ್ದು, ಮಧ್ಯವರ್ತಿಗಳು ಕ್ವಿಂಟಲ್‌ ಜೋಳಕ್ಕೆ ಕೇವಲ ₹ 600 ರಿಂದ ₹750 ನೀಡಿ ಖರೀದಿಸುತ್ತಿದ್ದಾರೆ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಕ್ವಿಂಟಲ್‌ಗೆ ₹ 1,400 ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆಎಂಫ್‌ಗೆ 1 ಲಕ್ಷ ಕ್ವಿಂಟಲ್‌ ಮೆಕ್ಕೆಜೋಳದ ಅವಶ್ಯಕತೆ ಇದೆ. ವ್ಯವಸ್ಥಾಪಕ ನಿರ್ದೇಶಕರ ಜತೆಯೂ ಚರ್ಚಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ದಲ್ಲಾಳಿಗಳು ರೈತರಿಂದ ಕಡಿಮೆ ದರದಲ್ಲಿ ಜೋಳ ಖರೀದಿಸಿ ಬಳಿಕ ಹೆಚ್ಚಿನ ದರಕ್ಕೆ ಕೆಎಂಫ್‌ಗೆ ಮಾರಾಟ ಮಾಡುತ್ತಾರೆ. ಆ ರೀತಿ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಬೇಕು. ತಕ್ಷಣ ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ 25 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿಗೆ ಕೀಟಬಾಧೆ ತಗುಲಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ಕೃಷಿ ಅಧಿಕಾರಿಗಳು ಹುಳುಗಳ ನಿಯಂತ್ರಣಕ್ಕ ಕ್ರಮ ವಹಿಸಬೇಕು. ಮೊದಲೇ ರೈತರು ಬರಗಾಲದಿಂದ ತತ್ತರಿಸಿದ್ದಾರೆ ಎಂದು ನುಡಿದರು.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ನಾನು ಮಾತ್ರ ಸ್ಪರ್ಧಿಸುವುದು ಎಂದು ಹಲವು ಬಾರಿ ಹೇಳಲಾಗಿದೆ. ಯುವಕರಿಗೆ ಅವಕಾಶ ನೀಡುವುದಾದರೆ ನನ್ನ ಟಿಕೆಟ್‌ ಅನ್ನು ಪ್ರಜ್ವಲ್‌ ರೇವಣ್ಣ ಅವರಿಗೆ ನೀಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.