ರಾಮನಾಥಪುರ: ರಸ್ತೆ, ಚರಂಡಿ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಬಸ್ಸು ಸೌಲಭ್ಯ, ಸಮುದಾಯ ಭವನ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಕಾಣದೇ ಅಭಿವೃದ್ದಿಯಿಂ ದೂರ ಉಳಿದಿರುವ ಹೋಬಳಿಯ ಬೆಟ್ಟಸೋಗೆ ಗ್ರಾಮಕ್ಕೆ ಇದುವರೆಗೂ ನಾಗರಿಕತೆ ಸೋಂಕು ತಟ್ಟದೇ ಬೆಂದು ಬಸವಳಿದಿದೆ.
ಹಿಂದುಳಿದ ವರ್ಗದವರು, ಲಿಂಗಾಯಿತರು, ದಲಿತರು ಸೇರಿ 200 ಮನೆಗಳಿರುವ ಪುಟ್ಟ ಗ್ರಾಮವಾದರೂ ಸಮಸ್ಯೆಗಳು ಬೆಟ್ಟದಷ್ಟಿವೆ. ಅರಕಲಗೂಡು ತಾಲ್ಲೂಕಿನ ಶಾಸಕರಾಗಿ ಹಿಂದೆ ಆಯ್ಕೆಯಾಗಿದ್ದ ಮಾಜಿ ಸಚಿವದ್ವಯರಾದ ಕೆ.ಬಿ. ಮಲ್ಲಪ್ಪ ಹಾಗೂ ಎಚ್.ಎನ್. ನಂಜೇಗೌಡರ ಕಾಲದಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ, ರಸ್ತೆ ಸೇರಿದಂತೆ ಒಂದಿಷ್ಟು ಮಟ್ಟಿಗೆ ಅಭಿವೃದ್ದಿ ಕೆಲಸಗಳಾಗಿದ್ದವು.
ಬಳಿಕ 90ರ ದಶಕದಿಂದ ಈಚಿನ ವರ್ಷಗಳಲ್ಲಿ ಆಯ್ಕೆಯಾಗಿ ಬಂದ ಎ.ಟಿ. ರಾಮಸ್ವಾಮಿ ಮತ್ತು ಹಾಲಿ ಶಾಸಕ ಎ. ಮಂಜು ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುವುದನ್ನು ಬಿಟ್ಟರೆ ನಂತರದ ದಿನಗಳಲ್ಲಿ ಇತ್ತ ಮುಖ ಮಾಡುವುದೇ ಮರೆತು ಹೋಗುತ್ತದೆ. ಹಾಗಾಗಿ ಊರಿನ ಅಭಿವೃದ್ದಿ ಬಗ್ಗೆ ಗ್ರಾಮಸ್ಥರು ಬರಿ ಕನಸು ಕಾಣುವುದೇ ಆಗಿದೆ.
ರಸ್ತೆ, ಚರಂಡಿ ಅವ್ಯವಸ್ಥೆ: ಕುರುಬ ಸಮಾಜದವರು ವಾಸವಾಗಿರುವ ಗ್ರಾಮದ ಕೊಪ್ಪಲು ಓಣಿಯಲ್ಲಿ ಪಾದಚಾರಿಗಳು ನಡೆದಾಡಲು ಆಗದಷ್ಟು ಮಟ್ಟಿಗೆ ತೀರ ಕೆಟ್ಟದಾಗಿದೆ. ತಗ್ಗು- ಗುಂಡಿಗಳಿಂದ ಕೂಡಿರುವ ಮಣ್ಣು ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗುತ್ತದೆ. ಜೆಡಿಎಸ್ ಮುಖಂಡ ಎ.ಟಿ. ರಾಮಸ್ವಾಮಿ ಶಾಸಕರಾಗಿದ್ದಾಗ ಬೆಟ್ಟಸೋಗೆ ಗೇಟ್‌ನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ರಸ್ತೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣ ಕಾಣಲಿಲ್ಲ. ಗುಂಡಿ ಬಿದ್ದು ಅದ್ವಾನವಾಗಿರುವ ಕಚ್ಚಾ ರಸ್ತೆಯಲ್ಲಿ ದಿನನಿತ್ಯ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಸಾರ್ವಜನಿಕರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಸಮುದಾಯ ಭವನವಿಲ್ಲದೇ ಗ್ರಾಮಸ್ಥರು ಮದುವೆ ಇತರ ಸಮಾರಂಭಗಳನ್ನು ನಡೆಸಲು ನಡು ರಸ್ತೆಯಲ್ಲೇ ಶಾಮೀಯಾನ ಹಾಕಿಕೊಳ್ಳುತ್ತಾರೆ.
ನೀರಿಗೆ ತತ್ವಾರ: ಗ್ರಾಮದಲ್ಲಿದ್ದ ಹಳೆಯ ಕಾಲದ ಏಳೆಂಟು ಕೈಪಂಪುಗಳು ಹಾಳಾಗಿವೆ. ಅಂತರ್ಜಲ ಕುಸಿತ ಇರುವ ಕಾರಣ ಒಂದೆರಡು ಸೇದುವ ಕೊಳವೆ ಬಾವಿಗಳಲ್ಲಿ ನೀರು ಸರಿಯಾಗಿ ಬಾರದೇ, ಕುಡಿಯಲು ಸಹ ಯೋಗ್ಯವಾಗಿಲ್ಲ.
ಇಡೀ ಗ್ರಾಮಕ್ಕೆ ಕೊರೆಸಿರುವ ಒಂದೇ ಕಿರು ನೀರು ಯೋಜನೆ ಕೊಳವೆ ಬಾವಿ ಮೂಲಕ ಎಲ್ಲ ಮನೆಗಳ ನಳಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ ವರ್ಷ ಶಾಸಕರ ನಿಕರ್ಟವತಿಯೊಬ್ಬರು ಗ್ರಾಮಕ್ಕೆ ಕುಡಿಯುವ ನೀರು ಯೋಜನೆಯ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿದ್ದರು. ಈ ಕಾಮಗಾರಿ ಸಮರ್ಪಕವಾಗಿ ನಡೆಯದೇ ಕೆಲವು ಕಡೆ ಪೈಪ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.
ದೇಗುಲಗಳ ದುಸ್ಥಿತಿ: ಗ್ರಾಮದೇವತೆ ದೊಡ್ಡಮ್ಮತಾಯಿ ದೇವಸ್ಥಾನ ಅಭಿವೃದ್ದಿ ಕಂಡಿಲ್ಲ. ಕಾವೇರಿ ನದಿ ತಟದಲ್ಲಿ ಸಂಪೂರ್ಣ ಸೈಜು, ಚಪ್ಪಡಿ ಕಲ್ಲುಗಳಿಂದಲೇ ಕಟ್ಟಲ್ಪಟ್ಟಿರುವ ಪುರಾತನ ಕಾಲದ ಮಲ್ಲೇಶ್ವರಸ್ವಾಮಿ ದೇಗುಲ ಅವಸಾನದ ಅಂಚಿನಲ್ಲಿವೆ.
ಬಸ್ ಸೌಲಭ್ಯವಿಲ್ಲ: ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೇ ತೊಂದರೆಯಾಗಿದೆ. ಆಟೋಗಳನ್ನು ಹಿಡಿದು ಬಸವಾಪಟ್ಟಣದಿಂದ 2 ಕಿ.ಮೀ. ಪ್ರಯಾಣಿಸಲು ರೂ. 100 ಬಾಡಿಗೆ ತೆರುವ ಸ್ಥಿತಿ ಇದೆ.
ಸಂತೆಗೆ ಸೇರಿದಂತೆ ಎಲ್ಲದಕ್ಕೂ ಬಸವಾಪಟ್ಟಣ ಇಲ್ಲವೇ ಕೇರಳಾಪುರಕ್ಕೆ ನಡೆದು ಹೋಗಬೇಕು. ಅಕ್ಕಿ, ಸಕ್ಕರೆ, ಸೀಮೆಎಣ್ಣೆ ಮುಂತಾದ ಪಡಿತರ ವಸ್ತುಗಳನ್ನು ತರಲು ಪ್ರತಿ ತಿಂಗಳು ಸೊಸೈಟಿಗಾಗಿ ನಾಲ್ಕೈದು ಕಿ.ಮೀ. ದೂರದ ಹೊನ್ನೇನಹಳ್ಳಿ, ಬಸವನಹಳ್ಳಿ ಕೊಪ್ಪಲು ತನಕ ದಣಿಯಬೇಕು. ತಮ್ಮೂರಿಗೆ ಪಡಿತರ ವಸ್ತುಗಳನ್ನು ಸರಬರಾಜು ಮಾಡಿಸುವಂತೆ ಶಾಸಕರನ್ನು ಹುಡುಕಿಕೊಂಡು ಹೋಗಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂಬುದು ಗ್ರಾಮಸ್ಥರು ದೂರು.
ಸೇತುವೆ ಆಗಬೇಕು. ಬೆಟ್ಟಸೋಗೆ ಕಾವೇರಿ ಹೊಳೆ ಪಕ್ಕದಲ್ಲಿ ಇರುವ ಕಾರಣ ರಾಮನಾಥಪುರ ಡಿಪೋದಿಂದ ಹೊರಡುವ ಬಸ್‌ಗಳು ಅಲ್ಲಿಂದ ಮುಂದಕ್ಕೆ ಬೇರೆ ಊರಿಗೆ ತೆರಳುವಂತಿಲ್ಲ. ಈ ಕಾರಣಕ್ಕಾಗಿ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಬೆಟ್ಟಸೋಗೆ ಹಾಗೂ ಆನಂದೂರಿನ ಮಧ್ಯೆ ಕಾವೇರಿ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆಯನ್ನು ಕಟ್ಟಿದರೆ ಬಸ್‌ಗಳು ಸಂಚರಿಸಲು ಅನುಕೂಲವಾಗುತ್ತದೆ ಎಂಬುದು ಜನರ ಬಹು ವರ್ಷಗಳ ಬೇಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.