ADVERTISEMENT

ಬೇಲೂರಿನಲ್ಲಿ ಶೇ. 68 ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 7:20 IST
Last Updated 1 ಜನವರಿ 2011, 7:20 IST

ಬೇಲೂರು:  ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಹಾಗೂ 17 ತಾಲ್ಲೂಕು ಪಂಚಾಯಿತಿಗಳಿಗೆ ಶುಕ್ರವಾರ ನಡೆದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿತ್ತು. ತಾಲ್ಲೂಕಿನಲ್ಲಿ ಶೇಕಡ 68.44ರಷ್ಟು ಮತ ಚಲಾವಣೆ ನಡೆದಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತಾದರೂ ಹಲವೆಡೆ ಮತದಾನ ಮಂದಗತಿಯಲ್ಲಿ ಆರಂಭಗೊಂಡಿತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಶೇಕಡ 40 ರಷ್ಟು ಮತದಾನ ಮಾತ್ರ ನಡೆದಿತ್ತು. ಬಳಿಕ ಮತದಾನ ಚುರುಕು ಗೊಂಡಿತು.

ಕೋಗಿಲಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹುಲುಗುಂಡಿ ಮತಗಟ್ಟೆಯಲ್ಲಿ 200ಕ್ಕೂ ಹೆಚ್ಚು ಮತದಾರರ ಬಳಿ ಗುರುತಿನ ಚೀಟಿ ಇದ್ದರೂ  ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಈ ಬಾರಿಯೂ ಹೆಸರು ಸೇರ್ಪಡೆಯಾಗಿಲ್ಲ ಎಂದು ಗ್ರಾಮದ ರಾಮಕೃಷ್ಣ ಆರೋಪಿಸಿದರು.

ಚಿಲ್ಕೂರು ಮತಗಟ್ಟೆಯಲ್ಲಿ ಎರಡು ಕಾಲು ಸ್ವಾಧೀನದಲ್ಲಿಲ್ಲದ ಲಕ್ಷ್ಮೀಪುರ ಗ್ರಾಮದ ಧರ್ಮೇಗೌಡ ಎಂಬವರನ್ನು ಸಹಾಯಕರೊಬ್ಬರು ಎತ್ತಿಕೊಂಡು ಬಂದ ಮತದಾನ ಮಾಡಿಸಿದರೆ, ಬಲ್ಲೇನಹಳ್ಳಿ ಮತಗಟ್ಟೆಯಲ್ಲಿ 90 ವರ್ಷದ ಗಂಗಮ್ಮ ಮತ್ತು ಹಳೆ ಗೆಂಡೇಹಳ್ಳಿ ಮತಗಟ್ಟೆಯಲ್ಲಿ 98 ವರ್ಷದ ಕಲ್ಲೇಗೌಡ ಸಹಾಯಕರೊಂದಿಗೆ ಬಂದು ಮತ ಚಲಾವಣೆ ಮಾಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.