ADVERTISEMENT

ಮಠಗಳೂ ಕಪ್ಪು ಹಣದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:25 IST
Last Updated 7 ಫೆಬ್ರುವರಿ 2011, 7:25 IST

ರಾಮನಾಥಪುರ: ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಬೃಹತ್ ಜನಾಂದೋಲನ ರೂಪಿಸದಿದ್ದರೆ ಪ್ರಜಾತಂತ್ರ ವ್ಯವಸ್ಥೆಗೆ ಉಳಿಗಾಲವಿಲ್ಲ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

ಅಗ್ರಹಾರ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ದೊಡ್ಡಮಗ್ಗೆ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ ಹಿಡಿದು ಎಲ್ಲೆಡೆ ಭ್ರಷ್ಟಾಚಾರದ ಆರ್ಭಟ ಹೆಚ್ಚಿದೆ. ಇದರೊಟ್ಟಿಗೆ ಈಗ ಕಪ್ಪುಹಣ ಎನ್ನುವ ಮಾರಕ ಪಿಡುಗು ಹುಟ್ಟಿಕೊಂಡಿದೆ. ಬಹುತೇಕ ಮಠ ಮಾನ್ಯಗಳೂ ಕೂಡ ಕಪ್ಪುಹಣದ ಕೇಂದ್ರಗಳಾಗುತ್ತಿವೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ನ್ಯಾಯ ದಕ್ಕಿಸಿಕೊಂಡು ವಾಪಾಸ್ಸು ಬರಲು ಸಾಧ್ಯವಿಲ್ಲ. ಸಾರ್ವಜನಿಕರು ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಿದ ತೆರಿಗೆ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆ ವಿರುದ್ಧ ಜನಸಾಮಾನ್ಯರು ಸಿಡಿದೇಳದಬೇಕು. ಇಲ್ಲವಾದರೆ ಜನತಂತ್ರ ವ್ಯವಸ್ಥೆಯೇ ಅವಸಾನವಾಗಲಿದೆ ಎಂದರು.

ಜೆಡಿಎಸ್‌ನಿಂದ ತಾಲ್ಲೂಕಿನಲ್ಲಿ ಹಿಂದುಳಿದ ಜಾತಿಗೆ ಟಿಕೆಟ್ ನೀಡಿತ್ತು. ಎಲ್ಲ 5 ಜಿ.ಪಂ. ಮತ್ತು 13 ತಾ.ಪಂ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.  ನೂತನ ಸದಸ್ಯರು ರೈತರು, ಬಡವರು ಹಾಗೂ ದೀನ ದಲಿತರ ಉದ್ಧಾರಕ್ಕಾಗಿ ಸಮಯ ಮುಡುಪಾಗಿ ಇಡುವ ಮೂಲಕ ಒಳ್ಳೆಯ ಅಭಿವೃದ್ದಿ ಕಾರ್ಯ ಕೈಗೊಳ್ಳುವಂತೆ ಸಲಹೆ ಮಾಡಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಲೋಕನಾಥ್, ತಾ.ಪಂ. ಮಾಜಿ ಅಧ್ಯಕ್ಷ ಎಚ್. ಮಾದೇಶ್ ಮಾತನಾಡಿದರು.

ಜಿ.ಪಂ. ಸದಸ್ಯರಾದ ಭಾಗ್ಯಮ್ಮ ಗೋವಿಂದೇಗೌಡ, ಪಾರ್ವತಮ್ಮ ನಂಜುಂಡಾಚಾರ್, ಸರೋಜಮ್ಮ ರಾಮೇಗೌಡ, ನಾಗಮಣಿ ರಾಮು, ನಂಜುಂಡಸ್ವಾಮಿ, ಮಾಜಿ ಸದಸ್ಯರಾದ ಬಿ.ಜೆ. ಅಪ್ಪಣ್ಣ, ಎಚ್.ಎಸ್. ಶಂಕರ್, ತಾ.ಪಂ. ಸದಸ್ಯರಾದ ಪಾಂಡುರಂಗ, ಸತೀಶ್, ಸಾಕಮ್ಮ ಯೋಗೇಗೌಡ, ಉಷಾ ಸಿದ್ದರಾಮೇಗೌಡ, ಜವರಮ್ಮ ಅಯ್ಯಣ್ಣಗೌಡ, ಸೋಮಾಚಾರಿ, ಮಾಕಮ್ಮ ಜವರೇಗೌಡ, ಆಶಾ, ದೇವರಾಜೇಗೌಡ, ಮಾಜಿ ಸದಸ್ಯ ಮಲ್ಲಿತಮ್ಮಹಳ್ಳಿ ರಾಮಶೇಷ, ಅಗ್ರಹಾರ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ಬಸವಯ್ಯ, ಉಪಾಧ್ಯಕ್ಷ ಮೊಗಣ್ಣಗೌಡ, ದೊಡ್ಡಮಗ್ಗೆ ಗ್ರಾ.ಪಂ. ಅಧ್ಯಕ್ಷ ಈರಣ್ಣಗೌಡ, ಉಪಾಧ್ಯಕ್ಷೆ ಜಯಮ್ಮ, ಚಿಕ್ಕಹಳ್ಳಿ ಗ್ರಾ.ಪಂ. ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಮಗ್ಗೆ ಕೃಷ್ಣೇಗೌಡ, ವಕೀಲ ಎಚ್.ಎಸ್. ರೇವಣ್ಣ ಉಪಸ್ಥಿತರಿದ್ದರು.

ಜೆಡಿಎಸ್ ಮುಖಂಡ ಸುಂದರೇಶ್ ಸ್ವಾಗತಿಸಿದರು. ವಕೀಲ ಜನಾರ್ಧನ ಗುಪ್ತ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಜಿ.ಪಂ. ಮತ್ತು ತಾ.ಪಂ. ಸದಸ್ಯರನ್ನು ಗೌರವಿಸಲಾಯಿತು. ಅವಧಿ ಪೂರ್ಣಗೊಳಿಸಿದ ಜಿ.ಪಂ. ಮತ್ತು ತಾ.ಪಂ. ಮಾಜಿ ಸದಸ್ಯರಿಗೆ ಬೀಳ್ಕೊಡುಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.