ADVERTISEMENT

ಮನೆ ಬಾಗಿಲಿಗೆ ಸಿಲಿಂಡರ್: ಲೋಕಾಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:34 IST
Last Updated 6 ಸೆಪ್ಟೆಂಬರ್ 2013, 6:34 IST

ಅರಕಲಗೂಡು: ಗ್ರಾಹಕರ ಮನೆ ಬಾಗಿಲಿಗೆ ಗ್ಯಾಸ್ ಸಿಲಿಂಡರ್ ಸರಬ ರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಹಾಸನ ಜಿಲ್ಲಾ ಲೋಕಾಯುಕ್ತ ಎಸ್. ಪಿ. ವೇದಮೂರ್ತಿ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರ ಅಹವಾಲು ಸ್ವೀಕರಿಸಲು ಬುಧವಾರ ಆಗಮಿಸಿದ್ದ ಅವರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದಲ್ಲಿ ಗ್ಯಾಸ್ ಏಜೆನ್ಸಿ ಇಲ್ಲದ ಕಾರಣ ಹಾಸನದಿಂದ ಸರಭರಾಜು ಮಾಡಲಾಗುತ್ತಿದೆ. ಗ್ಯಾಸ್ ಏಜೆನ್ಸಿಯವರು ಸಿಲಿಂಡರ್‌ಗೆ 70 ರೂ ಹೆಚ್ಚುವರಿ ಹಣ ಪಡೆದರೂ ಮನೆ ಬಾಗಿಲಿಗೆ ತಲುಪಿಸುತ್ತಿಲ್ಲ.

ಕ್ರೀಡಾಂಗಣ ಇಲ್ಲವೆ,  ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಲಾರಿ ನಿಲ್ಲಿಸಿ ಸಿಲಿಂಡರ್ ವಿತರಿಸುತ್ತಾರೆ. ಬೆಳಿಗ್ಗೆ ನಾಲ್ಕು ಗಂಟೆಯಿಂದಲೆ ಕಾದುಕೊಳಿತು ಸಿಲಿಂಡರ್ ಪಡೆಯುವ ಪರಿಸ್ಥಿತಿ ಇದೆ. ಸಿಲಿಂಡರ್‌ಗಳನ್ನು ಆಟೋ ಬಾಡಿಗೆ ತೆತ್ತು ಮನೆಗೆ ಕೊಂಡೊಯ್ಯಲು ಪಡಿಪಾಟಲು ಪಡುವ ಸ್ಥಿತಿ ಇದೆ ಎಂದು ಗ್ರಾಹಕರು ತಮ್ಮ ಅಳಲು ತೋಡಿಕೊಂಡರು. ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮನೆ ಬಾಗಿಲಿಗೆ ಸಿಲಿಂಡರ್ ಸರಭರಾಜಿಗೆ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಪಡಿತರ ವಿತರಣೆ ಕುರಿತು ಸಾಕಷ್ಟು ದೂರುಗಳು ಬಂದಿದ್ದು ವ್ಯವಸ್ಥಿತ ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಶ್ರೇಣಿ 2 ತಹಶೀಲ್ದಾರ್ ಜಗಧೀಶ್ ಅವರಿಗೆ ಸೂಚಿಸಿದರು.

ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಅಲ್ಲಿನ ಪ್ರೌಢಶಾಲಾ ವಿಭಾಗದ ಅವ್ಯವಸ್ಥೆ ಕಂಡು ದಂಗು ಬಡಿದರು. ಸುಣ್ಣಬಣ್ಣ ಕಾಣದ ಕಟ್ಟಡ, ಮುರಿದ ಕಿಟಕಿ, ಬಾಗಿಲುಗಳು, ಸೋರುವ ಕೊಠಡಿಗಳು, ಬಾಗಿಲು ಇಲ್ಲದ ಶೌಚಾ ಲಯ ಮುಂತಾದ ಅವ್ಯವಸ್ಥೆ ಕಂಡು ಕಿಡಿಕಿಡಿಯಾದರು. ಕಟ್ಟಡದ ದುರಸ್ಥಿ ಗಾಗಿ ಹಣವನ್ನು ವ್ಯಯ ಮಾಡಿರುವುದು.

ಹಾಸನಕ್ಕೆ ತೆರಳಿದ್ದ ಮುಖ್ಯ ಶಿಕ್ಷಕರು ಬಂದ ಕೂಡಲೇ ದಾಖಲೆಗಳೊಂದಿಗೆ ತಮ್ಮ ಕಚೇರಿಯಲ್ಲಿ ಬಂದು ಭೇಟಿಯಾಗುವಂತೆ ಸೂಚಿಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.