ADVERTISEMENT

ಮರಗಳ ಹನನ; ಗ್ರಾಮಸ್ಥರ ವಿರೋಧ

ಕೆ.ಎಸ್.ಸುನಿಲ್
Published 18 ಜುಲೈ 2017, 7:00 IST
Last Updated 18 ಜುಲೈ 2017, 7:00 IST
ಹಾಸನ ನಗರದಲ್ಲಿ ವಾಹನಗಳ ದಾಖಲೆ ಪರಿಶೀಲಿಸಿದ ಸಂಚಾರ ಪೊಲೀಸರು
ಹಾಸನ ನಗರದಲ್ಲಿ ವಾಹನಗಳ ದಾಖಲೆ ಪರಿಶೀಲಿಸಿದ ಸಂಚಾರ ಪೊಲೀಸರು   

ಹಾಸನ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರೇ ಎಚ್ಚರ. ಪಾನಮತ್ತರಾಗಿ ಪೊಲೀಸರಿಗೆ ಸಿಕ್ಕಿ ಬಿದ್ದರೆ ವಾಹನ ವಶಕ್ಕೆ ಪಡೆಯುತ್ತಾರೆ. ನಂತರ ಕೌನ್ಸೆಲಿಂಗ್‌ಗೂ ಹಾಜರಾಗಬೇಕು.

ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ತಡೆಯಲು ಜಿಲ್ಲಾ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಾನಮತ್ತ ಚಾಲಕರು ಸಿಕ್ಕಿ ಬಿದ್ದರೆ ಇನ್ನು ಮುಂದೆ ಸ್ಥಳದಲ್ಲಿಯೇ ದಂಡ ಕಟ್ಟಿಸಿಕೊಂಡು ವಾಹನ ಬಿಡುವುದಿಲ್ಲ. ಕೋರ್ಟ್‌ನಲ್ಲಿ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು. ಇಷ್ಟಕ್ಕೆ ಮುಗಿಯುವುದಿಲ್ಲ. ವಾಹನ ಸವಾರ ತನ್ನ ಪತ್ನಿ ಅಥವಾ ತಂದೆ, ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕು.    

ADVERTISEMENT

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆ ನೀಡಿದ ಮಾಹಿತಿ ಪ್ರಕಾರ ದಂಡದ ವಸೂಲಾತಿಯಲ್ಲಿ ಗಮನಾರ್ಹ ಏರಿಕೆಯಾಗಿದೆ.

ನಗರ ಪೊಲೀಸರು ಕಳೆದ ವರ್ಷ ವಿಧಿಸಿದ್ದ ದಂಡ ₹ 46,50,400 ಇತ್ತು. ಈ ಬಾರಿ ಜೂನ್‌ ಅಂತ್ಯಕ್ಕೆ ₹ 23,41,100 ದಾಟಿದೆ. ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ದಂಡ ವಸೂಲಾತಿಯ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ.

ನಗರದಲ್ಲಿ ಪ್ರತಿದಿನ ಪೊಲೀಸರು ಸರಾಸರಿ 200 ಪಕ್ರರಣ ದಾಖಲಿಸಿ ₹ 20 ಸಾವಿರ ದಂಡ ವಸೂಲು ಮಾಡುತ್ತಿದ್ದಾರೆ. ಪಾನಮತ್ತ ಚಾಲನೆ ಪ್ರಕರಣದಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ದಂಡ ವಸೂಲಾತಿ 2015ರಲ್ಲಿ ₹ 36,56,500 ಇದ್ದರೆ, ಅದು 2016ರಲ್ಲಿ ₹ 46,50,400ಕ್ಕೆ ಏರಿಕೆಯಾಗುವ ಮೂಲಕ ನಗರದಲ್ಲಿಯೇ ಅಧಿಕ ದಂಡ ಸಂಗ್ರಹವಾಗಿತ್ತು. ಹೆಚ್ಚುತ್ತಿರುವ ವಾಹನ ಸಂಖ್ಯೆಗಳ ಜತೆಗೆ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ದಂಡ ವಸೂಲಾತಿ ಪ್ರಮಾಣದಲ್ಲೂ ಏರಿಕೆಯಾಗಿದೆ ಎನ್ನಲಾಗಿದೆ.

ನಿಯಮ ಉಲ್ಲಂಘನೆ: ಹೆಲ್ಮೆಟ್‌ ಧರಿಸದ ಪ್ರಕರಣ, ಪಾನಮತ್ತ ವಾಹನ ಚಾಲನೆ, ಚಾಲನಾ ಪರವಾನಗಿ (ಡಿ.ಎಲ್‌) ಇಲ್ಲದೇ ಇರುವುದು, ಕರ್ಕಶ ಹಾರ್ನ್‌, ವೇಗದ ಚಾಲನೆ, ಬಸ್‌, ಕಾರು ಹಾಗೂ ಇತರೆ ವಾಹನಗಳಲ್ಲಿ ಮಿತಿ ಮೀರಿದ ಪ್ರಯಾಣಿಕರ ಸೇರ್ಪಡೆ, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ಏಕಮುಖ ರಸ್ತೆಯಲ್ಲಿ ಸಂಚಾರ, ವ್ಹೀಲಿಂಗ್‌, ಅಡ್ಡಾದಿಡ್ಡಿ ವಾಹನ ಚಾಲನೆ, ಸಿಗ್ನಲ್ ಜಂಪ್‌, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ವಾಹನ ಓಡಿಸುವಾಗ ಮೊಬೈಲ್‌ ಫೋನ್‌ ಬಳಕೆಗೆ ದಂಡ ವಿಧಿಸಲಾಗುತ್ತಿದೆ. ಅದರಲ್ಲೂ ಹೆಲ್ಮೆಟ್‌ ಧರಿಸದೆ ಹಾಗೂ ಪಾನಮತ್ತ ಚಾಲನೆ ಮಾಡಿದ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.

2016 ರಲ್ಲಿ ಸಂಗ್ರಹಿಸಿದ ದಂಡದ ಮೊತ್ತವೇ ಅಧಿಕ ಎಂದು ಹೇಳಲಾಗುತ್ತಿತ್ತು. ಆದರೆ 2017ರಲ್ಲಿ ಜೂನ್‌ ಅಂತ್ಯಕ್ಕೆ 21,317 ಪ್ರಕರಣ ದಾಖಲಾಗಿ ₹ 23,41,100 ದಂಡ ಸಂಗ್ರಹಿಸಲಾಗಿದೆ. ಇದೇ ರೀತಿ ಮುಂದುವರಿದರೆ ವರ್ಷಾಂತ್ಯಕ್ಕೆ ದಂಡದ ಮೊತ್ತ ಮತ್ತಷ್ಟು ಏರಿಕೆಯಾಗುವುದರಲ್ಲಿ ಸಂಶಯವಿಲ್ಲ.

ಸಂಚಾರಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಧು ಮಾತನಾಡಿ, ‘ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದೆ. ಹೆಲ್ಮೆಟ್‌ ಇಲ್ಲದೆ ವಾಹನ ಚಾಲನೆ ಅಪಾಯ ಎಂದೂ ಗೊತ್ತಿದ್ದರೂ ಧರಿಸುವುದಿಲ್ಲ. ಕೆಲವರು ಹೆಲ್ಮೆಟ್‌ ಇದ್ದರೂ ಬಳಸುವುದಿಲ್ಲ’ ಎಂದು ಹೇಳಿದರು.

**

ಕೋರ್ಟ್‌ನಲ್ಲಿ ದಂಡ ಪಾವತಿಸಲಿ

‘ಸಂಚಾರ ನಿಯಮ ಕುರಿತು ಶಾಲಾ, ಕಾಲೇಜು ಹಾಗೂ ಇತರೆಡೆ ಕರಪತ್ರ, ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕುಡಿದು ಚಾಲನೆ ಮಾಡುವುದು ಅಪಾಯ. ಇದರಿಂದ ಮತ್ತೊಬ್ಬರ ಪ್ರಾಣಕ್ಕೂ ಕುತ್ತು.

ಹೀಗಾಗಿ, ಇನ್ನೂ ಮುಂದೆ ಪಾನಮತ್ತ ಚಾಲಕರು ಸಿಕ್ಕಿಬಿದ್ದರೆ ದಂಡ ಕಟ್ಟಿಸಿಕೊಂಡು ಕಳುಹಿಸುವುದಿಲ್ಲ. ಸವಾರನ ಪತ್ನಿ ಅಥವಾ ತಂದೆ, ತಾಯಿ ಬಂದು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸ ಬೇಕು. ಕೋರ್ಟ್‌ನಲ್ಲಿ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು. ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡುವುದು ಎಲ್ಲ ರೀತಿಯಿಂದಲೂ ಒಳ್ಳೆಯದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌  ಸಲಹೆ ನೀಡಿದರು.

**

ಕೇವಲ ದಂಡ ವಿಧಿಸುವುದು ಇಲಾಖೆ ಉದ್ದೇಶವಲ್ಲ. ಸಂಚಾರ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

-ರಾಹುಲ್‌ ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.