ADVERTISEMENT

ಮಹಿಳಾ ವೈದ್ಯರ ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 4:30 IST
Last Updated 14 ಜುಲೈ 2012, 4:30 IST

ಅರಸೀಕೆರೆ: ಮಹಿಳಾ ವೈದ್ಯೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ಕೊರತೆಯನ್ನು ಖಂಡಿಸಿ ಹಾಗೂ ಮೊದಲಿದ್ದ ವೈದ್ಯರಾದ ಡಾ.ತಿಮ್ಮರಾಜು ಅವರ ಬಗ್ಗೆ ಆರೋಪ ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಡಿ.ಎಂಕುರ್ಕೆ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಘಟಕದ ಮುಂಭಾಗ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಧರಣಿ ನಡೆಸಿದರು.

ಶುಕ್ರವಾರ ಬೆಳಿಗ್ಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಘಟಕದ ಮುಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ     ಎಸ್.ಆರ್. ಶಿವಕುಮಾರ್, ಮುಖಂಡರಾದ ನಂಜುಂಡಶೆಟ್ಟಿ, ಡಿ.ಎಸ್.ಎಸ್. ಮುಖಂಡ ಡಿ.ಕೆ.ಹರೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ಲೋಕೇಶ್, ಡಿ.ಜೆ.ಸುರೇಶ್, ಜಯದೇವ್, ಸೇವಾ ಸಹಕಾರ ಸಂಘದ ನಿರ್ದೇಶಕ ನಿಂಗಪ್ಪ, ಶಶಿಧರ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಇಬ್ಬರು ವೈದ್ಯರಿದ್ದು, ಅದರಲ್ಲಿ ಪುರುಷ ವೈದ್ಯರಿದ್ದು, ಮಹಿಳಾ ವೈದ್ಯರಿಲ್ಲ, ಆರೋಗ್ಯ ಕಾರ್ಯಕರ್ತೆ ಇಲ್ಲ, ಆ್ಯಂಬುಲೆನ್ಸ್ ವಾಹನಕ್ಕೆ ಚಾಲಕರಿಲ್ಲ. ಇರುವ ಒಬ್ಬ ವೈದ್ಯ ಡಾ. ಶ್ರೀಧರ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಡಾ. ತಿಮ್ಮರಾಜು ಆಸ್ಪತ್ರೆಗೆ ಬರುವ ರೋಗಿಗಳ ಜತೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಎಷ್ಟೇ ಜನ ರೋಗಿಗಳಿದ್ದರೂ ಎಲ್ಲರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಕಳು ಹಿಸುತ್ತಿದ್ದಾರೆ. ಆದರೆ ಯಾರದೋ ಚಿತಾವಣೆ ಯಿಂದ ಅವರ ಬಗ್ಗೆ ದೂರು ಸಲ್ಲಿಸಿ ಮಾನಸಿಕ ಹಿಂಸೆ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟ ನಾಕಾರರು ಒತ್ತಾಯಿಸಿದರು.

ಈ ಆರೋಗ್ಯ ಘಟಕದ ವ್ಯಾಪ್ತಿಗೆ ಅನೇಕ ಹಳ್ಳಿಗಳು ಸೇರುತ್ತವೆ. ಪ್ರತಿನಿತ್ಯ ನೂರಾರು ಮಹಿಳೆಯರು ರೋಗ-ರುಜಿನಗಳಿಂದ ಬರುತ್ತಾರೆ. ಆದರೆ ಮಹಿಳಾ ವೈದ್ಯರಿಲ್ಲದೆ ತಾಲ್ಲೂಕು ಕೇಂದ್ರಕ್ಕೆ ತೆರಳುತ್ತಾರೆ. ಇರುವ ಆ್ಯಂಬುಲೆನ್ಸ್ ವಾಹನಕ್ಕೆ ಚಾಲಕನಿಲ್ಲದೆ ವಾಹನ ಒಂದು ಮೂಲೆ ಸೇರಿದೆ. ಸರ್ಕಾರ ರೋಗಗಳಿಗೆ ಔಷಧಿ ಹಾಗೂ ಮಾತ್ರೆಗಳ ಖರೀದಿಗೆ ಹಣ ಬಿಡುಗಡೆ ಮಾಡಿದ್ದರೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧಿ ಮಾತ್ರೆ ನೀಡದೇ ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿ ಬರೆದು ಕಳುಹಿಸುತ್ತಾರೆ. ಆಸ್ಪತ್ರೆ ಇದ್ದರೂ ಜನರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ದೂರಿದರು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ತಾಲ್ಲೂಕು ಆರೋಗ್ಯಧಿಕಾರಿ ಡಾ. ಶಂಕರಪ್ಪ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಸರಿಯಾದ ರೀತಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ವಾಪಸ್ಸು ತೆರಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸೌಭಾಗ್ಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ಮರುಳಪ್ಪ, ಮಾಡಾಳು ಚಂದ್ರಪ್ಪ ಉಪಸ್ಥಿತರಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.