ADVERTISEMENT

ಮೊಕದ್ದಮೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:27 IST
Last Updated 24 ಸೆಪ್ಟೆಂಬರ್ 2013, 6:27 IST

ಹಾಸನ: ‘ಅಕ್ರಮ ಚಟುವಟಿಕೆ ತಡೆಯಲು ಹೋದ ನನ್ನ ವಿರುದ್ಧವೇ ಪೊಲೀಸರು ಮೊಕದ್ದಮೆ  ದಾಖಲಿಸಿದ್ದು, ಅದನ್ನು ಹಿಂತೆಗೆದುಕೊಳ್ಳದಿದ್ದರೆ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ’ ಎಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಾನಕೆರೆ ಹೇಮಂತ್‌ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಶಂಕಾಸ್ಪದವಾಗಿ ನಿಂತಿದ್ದ ಜೋಡಿಯನ್ನು ನೋಡಿ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೆ. ಅಕ್ರಮ ಚಟುವಟಿಕೆಗಳಿಗೆ ಈ ಪ್ರದೇಶ ಬಳಕೆಯಾಗುತ್ತಿದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ಇಲ್ಲೂ ಅಂಥದ್ದೇ ಯಾವುದೋ ಘಟನೆ ನಡೆಯುತ್ತಿದೆ ಎಂದು ಶಂಕೆ ಮೂಡಿತ್ತು. ಆದರೆ, ಪೊಲೀಸರು ನಮ್ಮ ವಿರುದ್ಧವೇ ದೂರು ದಾಖಲಿಸಿ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಪೊಲೀಸರ ವರ್ತನೆ ಬದಲಾಗದಿದ್ದರೆ ನಡು ರಸ್ತೆಯಲ್ಲಿ ಅಕ್ರಮ ನಡೆದರೂ ಜನರು ಕಣ್ಣುಮುಚ್ಚಿ ಕೂರುವ ಸ್ಥಿತಿ ಬರುತ್ತದೆ’ ಎಂದು ಹೇಮಂತ್‌ ಆರೋಪಿಸಿದರು.

ಯುವತಿ ಜತೆ ಮಾತನಾಡುತ್ತ ನಿಂತಿದ್ದ ಹುಡುಗನನ್ನು ಥಳಿಸಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಹೇಮಂತ್‌, ‘ನನ್ನ ವಿರುದ್ಧವೇ ಕೆಲವು ಆರೋಪ ಮಾಡಲು ಬಂದಾಗ ಆತನನ್ನು ಹಿಡಿಯುವ ಪ್ರಯತ್ನ ಮಾಡಿದ್ದೆ. ಆತ ತಪ್ಪಿಸಲು ಹೋದಾಗ ಆತನ ಅಂಗಿ ಹರಿದಿದೆ. ನಾನು ಹಲ್ಲೆ ನಡೆಸಿಲ್ಲ’ ಎಂದರು.

ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಕುಮಾರ್‌ ಹಾಗೂ ರಮೇಶ್‌ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.