ADVERTISEMENT

ಯಗಚಿ ಜಲಾಶಯ: ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:03 IST
Last Updated 6 ಡಿಸೆಂಬರ್ 2012, 9:03 IST

ಬೇಲೂರು: ಪಟ್ಟಣಕ್ಕೆ ಸಮೀಪದ ಚಿಕ್ಕಬ್ಯಾಡಿಗೆರೆ ಬಳಿ ಇರುವ ಯಗಚಿ ಜಲಾಶಯ ಡಿಸೆಂಬರ್ ತಿಂಗಳಿನಲ್ಲಿಯೇ ಬರಿದಾಗುವ ಸ್ಥಿತಿ ತಲುಪಿದೆ. ಅಣೆಕಟ್ಟೆ ನಿರ್ಮಾಣವಾಗಿ ಎಂಟು ವರ್ಷಗಳ ಬಳಿಕ ಜಲಾಶಯ ಬತ್ತಿಹೋಗುವ ಸ್ಥಿತಿಗೆ ಬಂದಿದೆ. ಇದರಿಂದಾಗಿ ಮೂರು ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಭೀತಿ ಮೂಡಿದೆ.

ಯಗಚಿ ಅಣೆಕಟ್ಟೆಯಲ್ಲಿ 2004ರಿಂದ ನೀರಿನ ಸಂಗ್ರಹಿಸಲಾಗುತ್ತಿದೆ. ಸಣ್ಣ ಜಲಾಶಯವಾದ್ದರಿಂದ ಸಾಮಾನ್ಯ ಮಳೆಯಾದರೂ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಈ ವರ್ಷ ಜಲಾಶಯ ತುಂಬಿಲ್ಲ. 3.6 ಟಿ.ಎಂ.ಸಿ ಅಡಿ ಗರಿಷ್ಠ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈಗ 1.7 ಟಿ.ಎಂ.ಸಿ.ಅಡಿ ನೀರು ಮಾತ್ರ ಉಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3.45 ಟಿ.ಎಂ.ಸಿ. ನೀರು ಶೇಖರಣೆಗೊಂಡಿತ್ತು ಎಂದು ಜಲಾಶ ಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟೇಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ಯಗಚಿ ಜಲಾಶಯದಿಂದ ಬೇಲೂರು, ಚಿಕ್ಕಮಗಳೂರು ಮತ್ತು ಅರಸೀಕೆರೆ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣಗಳಿಗೆ ಪೂರೈಸಲು 0.364 ಟಿ.ಎಂ.ಸಿ. ನೀರು ಅಗತ್ಯವಿದೆ. ಅಣೆಕಟ್ಟೆಯ ಡೆಡ್ ಸ್ಟೋರೇಜ್ 0.64 ಟಿ.ಎಂ.ಸಿ. ಇದೆ. ಅಣೆಕಟ್ಟೆಗೆ ಈ ವರ್ಷ ಕೇವಲ 1.5 ಟಿ.ಎಂ.ಸಿ. ನೀರು ಮಾತ್ರ ಹರಿದು ಬಂದಿದೆ. ಯಗಚಿ ಅಣೆಕಟ್ಟೆಯಿಂದ 37.5 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ. ಈಗ ಅಣೆಕಟ್ಟೆಯಲ್ಲಿರುವ ನೀರಿನಲ್ಲೇ 8 ತಿಂಗಳ ಕಾಲ ನಿರ್ವಹಣೆ ಮಾಡಬೇಕಾಗಿದೆ.

ನ್ಯಾಯಾಲಯದ ಆದೇಶದಂತೆ ಕಳೆದ ಬಾರಿ ತಮಿಳುನಾಡಿಗೆ ನೀರು ಕೊಡುವ ಸಂದರ್ಭ ಬಂದಾಗ ಈ ಜಲಾಶಯದಿಂದಲೂ ನೀರು ಹೊರಗೆ ಹರಿಸಲಾಗಿತ್ತು. ಅಣೆಕಟ್ಟೆ ಬರಿದಾಗಲು ಇದೂ ಕಾರಣವಾಗಿತ್ತು. ಈಗ ಮತ್ತೆ ಅದೇ ಭೀತಿ ಎದುರಾಗಿದೆ. ಈ ಬಾರಿಯೂಇಲ್ಲಿಂದ ನೀರು ಹರಿಸಿದರೆ ಕುಡಿಯುವ ನೀರಿಗೂ ಸಮಸ್ಯೆಯಾಗಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.