ಅರಕಲಗೂಡು: ತಾಲ್ಲೂಕಿನ ರಸ್ತೆ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಖ್ಯಾತ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಅವರು ಸೋಮವಾರ ವಿನೂತನವಾಗಿ ‘ಗಾನ ಪ್ರತಿಭಟನೆ’ ನಡೆಸಿದರು.
ಇವರ ಪ್ರತಿಭಟನೆಗೆ ವಿವಿಧ ಸಂಘ ಸಂಸ್ಥೆಗಳವರು, ವಕೀಲರು, ಪಟ್ಟಣದ ವ್ಯಾಪಾರಿಗಳೂ ಬೆಂಬಲ ಸೂಚಿಸಿದರು. ಹಾಸನ– ಅರಕಲಗೂಡು ರಸ್ತೆ, ರಾಮನಾಥಪುರ– ಪಿರಿಯಾಪಟ್ಟಣ ರಸ್ತೆ, ಕೇರಳಾಪುರ– ರುದ್ರಪಟ್ಟಣ ರಸ್ತೆ ಸೇರಿದಂತೆ ಅನೇಕ ಪ್ರಮುಖ ರಸ್ತೆಗಳು ಒಂದು ದಶಕದಿಂದ ದುರಸ್ತಿ ಕಂಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪರಿಣಾಮ ಉಂಟಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಆರ್.ಕೆ. ಪದ್ಮನಾಭ ಮತ್ತು ಅವರ ಶಿಷ್ಯಂದಿರು ಪಟ್ಟಣದ ಅ.ನ.ಕೃ. ವೃತ್ತದಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ‘ಗಾನ ಪ್ರತಿಭಟನೆ’ ನಡೆಸಿದರು.
ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಂಗೀತ ವಿದ್ವಾಂಸರು ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದವರೆಗೆ ಮೌನ ಮೆರವಣಿಗೆ ನಡೆಸಿದರು. ಬಳಿಕ ಅ.ನ.ಕೃ. ವೃತ್ತಕ್ಕೆ ಬಂದು ಅ.ನ.ಕೃ. ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಅಲ್ಲೇ ಸಿದ್ದಪಡಿಸಿದ್ದ ವೇದಿಕೆಯಲ್ಲಿ ಸಂಗೀತ ಕಛೇರಿ ಆರಂಭಿಸಲಾಯಿತು.
ಈ ಕಾರ್ಯಕ್ರಮಕ್ಕಾಗಿಯೇ ರಚಿಸಿದ್ದ ‘ರಸ್ತೆ ದುರಸ್ತಿ ನಮ್ಮ ಆಸಕ್ತಿ, ಮಂತ್ರಿಗಳೇ ಇತ್ತ ಗಮನ ಹರಿಸಿ, ಜನನಾಯಕರೆ ಆಲಿಸಿ, ನಮ್ಮ ಗಾನ ವಿನಂತಿಯ’ ಎಂಬ ಕೃತಿಯೊಂದಿಗೆ ಆರ್.ಕೆ. ಪದ್ಮನಾಭ ಗಾಯನ ಆರಂಭಿಸಿದರು. ಬಳಿಕ ತ್ಯಾಗರಾಜ, ವಾದಿರಾಜ, ಕನಕದಾಸ, ಪುರಂದರದಾಸ, ಪದ್ಮನಾಭದಾಸ ಮುಂತಾದವರ ಕೃತಿಗಳು ಹಾಗೂ ಬಸವಣ್ಣನ ವಚನಗಳ ಗಾನ ಸುಧೆ ಹರಿಯಿತು. ವೃತ್ತದಲ್ಲಿ ಸೇರಿದ್ದ ನೂರಾರು ಜನರು ಸಂಗೀತವನ್ನು ಕೇಳಿ ಆನಂದಿಸಿದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಯೋಗಾರಮೇಶ್, ವಿವಿಧ ಸಂಘಟನೆಗಳ ಮುಖಂಡರಾದ ಎ.ಎಸ್. ಪ್ರವೀಣ್, ಶಶಿಕುಮಾರ್, ರಮೇಶ್ ವಾಟಾಳ್, ಪುಟ್ಟರಾಜ್, ಎಸ್.ಎನ್.ನಾಗೇಂದ್ರ ಎನ್.ರವಿಕುಮಾರ್, ಪುನೀತ್‌ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.