ADVERTISEMENT

ರಸ್ತೆ ಮೇಲೆಯೇ ದನಗಳ ಠಿಕಾಣಿ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:02 IST
Last Updated 2 ಸೆಪ್ಟೆಂಬರ್ 2013, 6:02 IST

ಹಾಸನ: `ನಗರದ ರಸ್ತೆಗಳಲ್ಲಿ ತಿರುಗಾಡುವ ಬಿಡಾಡಿ ದನಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ದಂಡ ವಿಧಿಸಲು ಅಥವಾ ಗೋಶಾಲೆಗೆ ಕಳುಹಿಸಲು ನಗರಸಭೆ ತೀರ್ಮಾನಿಸಿದ್ದು, ದನಗಳ ಮಾಲೀಕರು ತಮ್ಮ ಹಸುಗಳು ರಸ್ತೆಯಲ್ಲಿ ಓಡಾಡದಂತೆ ಎಚ್ಚರ ವಹಿಸಬೇಕು'... ಎಂಬರ್ಥದ ಒಂದು ಪತ್ರಿಕಾ  ಪ್ರಕಟಣೆಯನ್ನು ನಗರಸಭೆಯ ಆಯುಕ್ತರು ಸರಿಸುಮಾರು ಒಂದು ವರ್ಷದ ಹಿಂದೆ ಹೊರಡಿಸಿದ್ದರು.

ಇಂಥ ಒಂದು ಆದೇಶ ಹೊರಬೀಳಲು ನಗರದಲ್ಲಿ ಹೆಚ್ಚುತ್ತಿರುವ ಬಿಡಾಡಿ  ದನಗಳ ಬಗ್ಗೆ `ಪ್ರಜಾವಾಣಿ' ಪ್ರಕಟಿಸಿದ್ದ ನಗರ ಸಂಚಾರವೂ ಕಾರಣವಾಗಿತ್ತು.

ಇದಾಗಿ ಸುಮಾರು ಒಂದು ವರ್ಷದ ಬಳಿಕ ಈಚೆಗೆ ಜಿಲ್ಲಾಡಳಿತವೂ ಇಂಥ ಒಂದು ಪ್ರಕಟಣೆ ಹೊರಡಿಸಿದೆ. ವಿಶೇಷವೆಂದರೆ ನಗರ ಸಭೆಯವರು ಬಿಡಾಡಿ ದನಗಳನ್ನು ಹಿಡಿದಿರುವುದನ್ನು ನಗರದ ಜನರು ಕಂಡಿಲ್ಲ.

ಮುಂಜಾನೆ ವಾಹನದಲ್ಲಿ ಬಂದರೆ ಬಹುತೇಕ ರಸ್ತೆಯಲ್ಲಿ ಬಿಡಾಡಿ ದನಗಳ ಗುಂಪು ಓಡಾಡುವುದು ಕಾಣಿಸುತ್ತಿದೆ.
ವಿದ್ಯಾನಗರ, ಎಂ.ಜಿ ರಸ್ತೆಯ ವ್ಯಾಪ್ತಿಯಲ್ಲಂತೂ ಬಿಡಾಡಿ ಹಸುಗಳು, ಅದರಲ್ಲೂ ಗೂಳಿಯೊಂದು ಕಳೆದ ಹಲವು ದಿನಗಳಿಂದ ರಾದ್ಧಾಂತವನ್ನೇ ಸೃಷ್ಟಿಮಾಡುತ್ತಿದೆ. ನಿಂತಿದ್ದ ದ್ವಿಚಕ್ರ ವಾಹನಗಳನ್ನು ತಳ್ಳಾಡಿ, ಬೀಳಿಸಿ ಅದನ್ನು ನಜ್ಜುಗುಜ್ಜು ಮಾಡುವುದು, ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವವರ ಮೇಲೆ ಎರಗಿ ದಾಳಿ ನಡೆಸುವುದು ಹಲವು ದಿನಗಳಿಂದ ನಡೆಯುತ್ತಿದೆ. ಸುಮಾರು ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ನಾಲ್ಕಾರು ಕಾರುಗಳನ್ನು ಜಖಂಗೊಳಿಸಿರುವ ಈ ಗೂಳಿ, ಎರಡು ದಿನಗಳ ಹಿಂದೆ ಎಂ.ಜಿ ರಸ್ತೆಯಲ್ಲಿ ವೃದ್ಧರೊಬ್ಬರನ್ನು ಎತ್ತಿ ಎಸೆದಿದೆ.

ಸಂಜೆ ವೇಳೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ 53 ವರ್ಷ ವಯಸ್ಸಿನ ರಂಗಸ್ವಾಮಿ ಎಂಬುವವರನ್ನು ಈ ಗೂಳಿ ಕೋಡಿನಿಂದ ತಿವಿದು ಮೇಲೆತ್ತಿ ಬೀಳಿಸಿದೆ. ಅದೃಷ್ಟವಶಾತ್ ಬೆನ್ನಿನ ಭಾಗಕ್ಕೆ ತಿವಿದ ಕಾರಣ ಹೆಚ್ಚಿನ ಅಪಾಯವಾಗಿಲ್ಲ. ಸ್ಥಳದಲ್ಲಿದ್ದ ಜನರು ಅವರನ್ನು ರಕ್ಷಿಸಿ ಆಸ್ಪತ್ರೆ ಸೇರಿಸಿದ್ದಾಗಿದೆ.

ಕೆ.ಆರ್.ಪುರಂ, ಎಂ.ಜಿ. ರಸ್ತೆ, ಆರ್.ಸಿ ರಸ್ತೆ,  ಹಳೆಯ ಬಸ್ ನಿಲ್ದಾಣ ರಸ್ತೆ, ಬಿ.ಎಂ. ರಸ್ತೆ... ಹೀಗೆ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಮುಂಜಾನೆ ಒಂದಿಲ್ಲೊಂದು ಕಡೆ ಹಸುಗಳ ಹಿಂಡು ಕಾಣಸಿಗುವುದು ಖಚಿತ. ರಾತ್ರಿ ವೇಳೆಯಲ್ಲಿ ರಸ್ತೆ ಮಧ್ಯದಲ್ಲೇ ಇವು ಮಲಗಿರುತ್ತವೆ. ಬೀದಿ ದೀಪಗಳಿಲ್ಲದ ಕಡೆ ಕಪ್ಪು ಹಸು ಮಲಗಿದ್ದರೆ ವಾಹನ ಸವಾರರಿಗೆ, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟದ್ದು. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಲೇ ಬೇಕಾಗಿದೆ.

ಹಸುಗಳದ್ದು ಒಂದು ಸಮಸ್ಯೆಯಾದರೆ ಬೀದಿ ನಾಯಿಗಳು ಇನ್ನೊಂದು ರೀತಿ ಕಾಡುತ್ತಿವೆ. ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದ ಯಾವ ಭಾಗದ್ಲ್ಲಲೂ ಮಕ್ಕಳು, ವೃದ್ಧರು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಇಲ್ಲ. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಗಿದೆ. ಆದರೆ ಎಲ್ಲ ಬೀದಿಗಳಲ್ಲಿ ಈಗ ನಾಯಿ ಮರಿಗಳು ಕಾಣಿಸುತ್ತಿವೆ.

ನಾಯಿಗಳ ಕಾಟ ಜನರಲ್ಲಿ ಎಷ್ಟರ ಮಟ್ಟಿಗೆ ಭಯ ಹುಟ್ಟಿಸಿದೆ ಎಂದರೆ, ಹಿಂದೆ ನಾಯಿಗಳನ್ನು ಕೊಲ್ಲಬೇಡಿ ಬೇರೆಲ್ಲಾದರೂ ತಂದು ಬಿಟ್ಟುಬಿಡಿ ಎಂಬ ಸಲಹೆ ನೀಡುತ್ತಿದ್ದವರು, `ಬೀದಿ ನಾಯಿಗಳನ್ನು ಕೊಂದರೂ ಅಡ್ಡಿ ಇಲ್ಲ, ನಮಗೆ, ನಮ್ಮ ಮಕ್ಕಳಿಗೆ ರಕ್ಷಣೆ ಕೊಡಿ ಎನ್ನುತ್ತಿದ್ದಾರೆ'

ಜನರಿಗೆ ಕಸ, ಹಾಗೂ ಕಸದ ದುರ್ನಾತದಿಂದ ಮುಕ್ತಿ ನೀಡುವ ಕಾರ್ಯ ಕೆಲವು ದಿನಗಳಿಂದ ನಗರದಲ್ಲಿ ಆಗುತ್ತಿದೆ. ಪ್ರಾಣಿಗಳಿಂದ ರಕ್ಷಣೆ ನೀಡುವತ್ತಲೂ ಜಿಲ್ಲಾಡಳಿತ ಗಮನ ಹರಿಸಲಿ ಎಂಬುದು ನಾಗರಿಕರ ಬಯಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.