ADVERTISEMENT

ರಾಜ್ಯಕ್ಕೆ ಹಾಸನ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಮೇ 2012, 7:55 IST
Last Updated 18 ಮೇ 2012, 7:55 IST
ರಾಜ್ಯಕ್ಕೆ ಹಾಸನ ಮೂರನೇ ಸ್ಥಾನ
ರಾಜ್ಯಕ್ಕೆ ಹಾಸನ ಮೂರನೇ ಸ್ಥಾನ   

ಹಾಸನ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಈ ವರ್ಷ ಹಾಸನ ಜಿಲ್ಲೆ ಇನ್ನೊಂದು ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಹಾಸನ ಮೂರನೇ ಸ್ಥಾನಕ್ಕೆ ಏರಿದೆ.2010-11ರಲ್ಲಿ 18 ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಏರುವ ಮೂಲಕ ಸಾಧನೆ ಮಾಡಿದ್ದ ಜಿಲ್ಲೆ, ಈ ಬಾರಿ ಅದಕ್ಕೂ ಹೆಚ್ಚಿನ ಸಾಧನೆ ಮಾಡಿ 9ನೇ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಮೊದಲ ರ‌್ಯಾಂಕ್ ಸಹ ಹಾಸನಕ್ಕೆ ಬಂದಿತ್ತು. ಈ ಬಾರಿ ರ‌್ಯಾಂಕ್ ಬಂದಿಲ್ಲ.

2011-12ನೇ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ 11,783 ಬಾಲಕರು ಹಾಗೂ 11,968 ಬಾಲಕಿಯರು (ಒಟ್ಟು 21,751 ವಿದ್ಯಾರ್ಥಿಗಳು) ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 9,722 ಬಾಲಕರು ಹಾಗೂ 10,685 ಬಾಲಕಿಯರು ತೇರ್ಗಡೆಯಾಗುವ ಮೂಲಕ ಜಿಲ್ಲೆ ಒಟ್ಟಾರೆ ಶೇ 85.32 ಫಲಿತಾಂಶ ದಾಖಲಿಸಿದಂತಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಶೇ 81.32 ಫಲಿತಾಂಶ ದಾಖಲಾಗಿತ್ತು. ಒಟ್ಟಾರೆ ಫಲಿತಾಂಶದಲ್ಲೂ ಶೇ 4ರಷ್ಟು ಏರಿಕೆಯಾದಂತಾಗಿದೆ.

ಸಮಾಜ ವಿಜ್ಞಾನಕ್ಕೆ ಆದ್ಯತೆ: `ಕಳೆದ ವರ್ಷ ಸಮಾಜ ವಿಜ್ಞಾನದಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಾಧ್ಯವಾಗಿರಲಿಲ್ಲ. ಅದನ್ನು ಗಮನಿಸಿ ಈ ವಿಷಯದ ಆಸಕ್ತಿ ನೀಡಿದ ಪರಿಣಾಮ ಫಲಿತಾಂಶ ಉತ್ತಮ ವಾಯಿತು~ ಎಂದು ಚಾಮರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ಗುಂಪು ಗಳನ್ನು ಮಾಡಿಕೊಂಡು ಅಧ್ಯಯನಕ್ಕೆ ಒತ್ತು ನೀಡಿದರು. ಮಕ್ಕಳ ಕೊರತೆಗಳ ಬಗ್ಗೆ ಕಡ್ಡಾಯವಾಗಿ ಅವರ ಪಾಲಕರೊಡನೆ ಹಂಚಿಕೊಳ್ಳಲು ಹೇಳಿದೆವು. ಶಿಕ್ಷಕರು ಇದನ್ನು ಪಾಲಿಸಿದರು. ಕಳೆದ ವರ್ಷ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಲ್ಲಿ ಹಾಗೂ ವಿಷಯ ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ವಿವೇಕಾನಂದ ಯೂತ್  ಮೂಮೆಂಟ್‌ನವರು ಸಿದ್ಧಪಡಿಸಿದ್ದ ಸಿ.ಡಿ.ಗಳನ್ನು ಕೊಟ್ಟು ಕಲಿಸಿದೆವು, ಇದು ಉಪಯೋಗವಾಯಿತು ಎಂದರು.

ವಿದ್ಯಾರ್ಥಿಗಳಿಗೆ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸತತವಾಗಿ ಪರೀಕ್ಷೆಗಳನ್ನು ಮಾಡಿಸಲಾ ಯಿತು. ಇದರ ಜತೆಗೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾರ್ಚ್ ಮೊದಲ ವಾರದ ಬದಲು, ಅಂತಿಮ ಪರೀಕ್ಷೆಗಿಂತ ಸ್ವಲ್ಪ ಮುಂಚೆ, ಅಂದರೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ನಡೆಸಿದೆವು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಹಾಯವಾಯಿತು.

ಫಲಿತಾಂಶ ಹೆಚ್ಚಿಸಲು ಈ ವರ್ಷ ಆಕಾಶವಾಣಿಯ ಸಹಾಯ ಪಡೆದದ್ದು ವಿಶೇಷ. ವಿಷಯಗಳ ಬಗ್ಗೆ, ವಿದ್ಯಾರ್ಥಿ ಗಳ ಸಮಸ್ಯೆಗಳ ಬಗ್ಗೆ ಪಾಲಕರ ಜತೆಗೆ ಸಂವಾದ ನಡೆಸಿದೆವು. ಪರೀಕ್ಷೆಗಿಂತ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿ ಗಳಿಗೆ ಸಹಾಯವಾಗುವಂತೆ `ಪರೀಕ್ಷಾ ಮಿತ್ರ~ಸಿದ್ಧಪಡಿಸಿ ಶಾಲೆಗಳಿಗೆ ನೀಡಲಾಯಿತು. ಇಂಥ ಹತ್ತು ಹಲವು ಯೋಜನೆಗಳ ಜತೆಗೆ ಜಿಲ್ಲೆಯ ಎಲ್ಲ ಶಿಕ್ಷಕರು ನೀಡಿದ ಸಹಕಾರದಿಂದ ಈ ಹೊಸ ದಾಖಲೆ ಸೃಷ್ಟಿಸಲು ಸಾಧ್ಯವಾ ಯಿತು ಎಂದು ನುಡಿದರು.

ಹೊಸ ಸಂಸ್ಕೃತಿ ರೂಪಿಸಿದ್ದೇವೆ: `ಹೇಗೆ ಓದಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ನಾವು ತಿಳಿಸಿಕೊಟ್ಟಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಾವು ಓದುವ ಸಂಸ್ಕೃತಿ ಯನ್ನು ರೀಪಿಸಿದ್ದರಿಂದ ಫಲಿತಾಂಶದಲ್ಲಿ ಜಿಲ್ಲೆ ಇನ್ನು ಮುಂದೆ ಎಂದಿಗೂ ಹತ್ತನೇ ಸ್ಥಾನಕ್ಕಿಂತ ಕೆಳಗಿಳಿಯಲಾರದು ಎಂಬ ವಿಶ್ವಾಸ ಮೂಡಿದೆ~ ಎಂದು ಚಾಮರಾಜ್ ನುಡಿಯುತ್ತಾರೆ.

ಬರಿಯ ಫಲಿತಾಂಶ ಉತ್ತಮ ಪಡಿಸಿದರೆ ಸಾಲದು. ಡಿಸ್ಟಿಂಕ್ಷನ್ ಪ್ರಮಾಣವನ್ನು ಹೆಚ್ಚಿಸಬೇಕಾದ ಅಗತ್ಯ ವಿದೆ. ಆ ನಿಟ್ಟಿನಲ್ಲೂ ನಾವು ಪ್ರಯತ್ನ ಮಾಡಿದ್ದೆವು. ಹಿಂದೆ ಜಿಲ್ಲೆಯಲ್ಲಿ ಡಿಸ್ಟಿಂಕ್ಷನ್ ಪಡೆದವರ ಸಂಖ್ಯೆ 40ರಷ್ಟಿತ್ತು. ಕಳೆದ ವರ್ಷ ಅದನ್ನು 1700ಕ್ಕೆ ಹೆಚ್ಚಿಸಿದ್ದೆವು. ಈ ವರ್ಷ ಕನಿಷ್ಠ 10ಸಾವಿರ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯಬೇಕು ಎಂಬ ಗುರಿ ಇಟ್ಟುಕೊಂಡಿದ್ದೆವು. ನಿಖರವಾಗಿ ಎಷ್ಟು ಜನ ಈ ಸಾಧನೆ ಮಾಡಿದ್ದಾರೆ ಎಂದು ಇನ್ನಷ್ಟೇ ತಿಳಿಯಬೇಕು. ಕನಿಷ್ಠ ಐದು ಸಾವಿರವಾದರೂ ಆಗಿರಬಹುದು ಎಂಬ ನಿರೀಕ್ಷೆ ಇದೆ~ ಎಂದರು.

ಮತ್ತೆ ಫಲಿಸಿದ ಚಾಮರಾಜ ಸೂತ್ರ

ಇತಿಹಾಸದಲ್ಲೇ ಹಾಸನ ಜಿಲ್ಲೆಯನ್ನು ಹತ್ತನೇ ಸ್ಥಾನಕ್ಕಿಂತ ಮೇಲೇರಿಸಿದ ಶ್ರೇಯಸ್ಸು ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಟಿ. ಚಾಮರಾಜ್ ಅವರಿಗೆ ಸಲ್ಲುತ್ತದೆ. 2009-10ರಲ್ಲಿ 18ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು 2010-11ರಲ್ಲಿ 9ನೇ ಸ್ಥಾನ ಲಭಿಸುವಂತೆ ಮಾಡಲಾಗಿತ್ತು. `ವಿದ್ಯಾರ್ಥಿಗಳನ್ನು ಮಾತ್ರವಲ್ಲ ಶಿಕ್ಷಕರನ್ನು ನಿರಂತರವಾಗಿ ತೊಡಗಿಸಿಕೊಂಡ ಪರಿಣಾಮ ಈ ಸಾಧನೆ ಮಾಡಲು ಸಾಧ್ಯವಾಯಿತು~ ಎಂದು ಅಂದು ಚಾಮರಾಜ್ ಆಗ ನುಡಿದಿದ್ದರು.

ಈ ಬಾರಿ ಜಿಲ್ಲೆಯನ್ನು ಮೊದಲ ಐದು ಸ್ಥಾನದೊಳಗೆ ತರಬೇಕು ಎಂಬ ಗುರಿ ಇಟ್ಟುಕೊಂಡು ಈ ವರ್ಷ ಕೆಲಸ ಮಾಡಿದ್ದರು. ಅದನ್ನು ಅನೇಕ ಬಾರಿ ಬಹಿರಂಗವಾಗಿ ವ್ಯಕ್ತ ಪಡಿಸಿದ್ದರು. ಈ ವರ್ಷ ಇನ್ನಷ್ಟು ಹೊಸ ಯೋಜನೆಗಳನ್ನು ಕಾರ್ಯಗತ ಮಾಡುತ್ತ ಗುರಿ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.