ADVERTISEMENT

ರಾಜ್ಯದ ಅಧಿಕಾರ ಹಿಡಿದವರಿಂದ ಮಾಟದ ಮಾತು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:35 IST
Last Updated 9 ಫೆಬ್ರುವರಿ 2011, 10:35 IST

ಚನ್ನರಾಯಪಟ್ಟಣ: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವರು ಮಾಟ, ಮಂತ್ರದ ಕುರಿತು  ಪ್ರಸ್ತಾಪ ಮಾಡುತ್ತಿರುವುದು ದುರದೃಷ್ಟಕರ. 21 ನೇ ಶತಮಾನದಲ್ಲಿ ಈ ರೀತಿಯ ಹೇಳಿಕೆಗಳು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬಾಲವಿಕಾಸ ಅಕಾಡೆಮಿಯ ಮಾಜಿ ಅಧ್ಯಕ್ಷ  ಶಂಕರ ಹಲಗತ್ತಿ ತಾಲ್ಲೂಕಿನ                 ಶ್ರವಣಬೆಳಗೊಳದಲ್ಲಿ ಮಂಗಳವಾರ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಜಿಲ್ಲಾಮಟ್ಟದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವರು ಈ ರೀತಿ ಮೌಢ್ಯ ಹುಟ್ಟು ಹಾಕುತ್ತಿದ್ದಾರೆ.ಇಂತಹವರಿಂದ ರಾಜ್ಯದ ಜನತೆ ಏನು ನಿರೀಕ್ಷಿಸಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ವಸುಂಧರ ಭೂಪತಿ ಮಾತನಾಡಿ, ವಿಜ್ಞಾನವನ್ನು ಕಲಿಯುವುದು ಮಾತ್ರವಲ್ಲ. ಜೀವನದಲ್ಲಿ ಅಳವಡಿಸಿಕೊಂಡರೆ ವೈಜ್ಞಾನಿಕ ಮನೊಭಾವನೆ ರೂಢಿಸಿಕೊಳ್ಳಬಹುದು ಎಂದು ಹೇಳಿದರು.ಜಿ.ಪಂ. ಸದಸ್ಯರಾದ ಎ.ಬಿ. ನಂಜುಂಡೇಗೌಡ, ಕುಸುಮರಾಣಿ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಡಾ.ಎಚ್. ಆರ್. ಸ್ವಾಮಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನಿಗಳಾದ ಡಾ.ಸಿ.ಆರ್. ಚಂದ್ರಶೇಖರ್, ಡಾ. ರಘೋತ್ತಮರಾವ್, ಪ್ರೊ. ಎಸ್.ವಿ. ಸುಬ್ರಹ್ಮಣ್ಯಂ, ಡಾ.ಪಿ.ಎನ್. ಜಗದೀಶ್, ನಾಗೇಶ್ ಅರಳಕುಪ್ಪೆ, ತಾ.ಪಂ. ಸದಸ್ಯ ಎಸ್.ಕೆ. ರಾಘವೇಂದ್ರ, ಗ್ರಾ.ಪಂ. ಅಧ್ಯಕ್ಷ ಎಸ್.ಟಿ. ಮಹೇಶ್ ಉಪಸ್ಥಿತರಿದ್ದರು.ಪರೀಕ್ಷೆ ಎದುರಿಸುವುದು ಹೇಗೆ ಮತ್ತು ಹದಿಹರೆಯದ ಸಮಸ್ಯೆಗಳು?, ‘ಮಾನವನ ಸೇವೆಯಲ್ಲಿ ಲೋಹಗಳ ಪಾತ್ರ’,  ನಕ್ಷತ್ರಗಳ ಹುಟ್ಟು, ಸಾವು ಕುರಿತು ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ, ವಿಜ್ಞಾನಿಗಳು ಸಂವಾದ ನಡೆಸಿದರು. ಮೈಸೂರಿನ ಬಾಲಮಂದಿರದ ಮಕ್ಕಳು ಸಂಜೆ ’ಮಾಯಾ ಕುದುರೆ’ ನಾಟಕ ಅಭಿನಯಿಸಿದರು.

ಮೌನ ಮೆರವಣಿಗೆ: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ಸರ್ಕಾರಿ ನೌಕರರು ಮೌನ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಅರ್ಪಿಸಲಾಗುವುದು. ಮೌನ ಮೆರವಣಿಗೆ ಮುಗಿದ ಬಳಿಕ ಪುನಃ ಕರ್ತವ್ಯಕ್ಕೆ  ಹಾಜರಾಗಲಾಗುವುದು ಎಂದು  ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಎನ್. ಲೋಕೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.