ADVERTISEMENT

ರಾಜ್ಯದ ರೈತರ ಹಿತ ಕಾಯಿರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:15 IST
Last Updated 7 ಅಕ್ಟೋಬರ್ 2012, 8:15 IST
ರಾಜ್ಯದ ರೈತರ ಹಿತ ಕಾಯಿರಿ
ರಾಜ್ಯದ ರೈತರ ಹಿತ ಕಾಯಿರಿ   

ಚನ್ನರಾಯಪಟ್ಟಣ: ಶಾಸಕ ಸಿ.ಎಸ್. ಪುಟ್ಟೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ರೈತರ ಹಿತ ಕಾಪಾಡುವಂತೆ ಕೇಂದ್ರದ ಅಧ್ಯಯನ ತಂಡಕ್ಕೆ ಶನಿವಾರ ಮನವಿ ಸಲ್ಲಿಸಿದರು.

ಹೊಳೆನರಸೀಪುರದಿಂದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಲಾಯಿತು. ಉತ್ತಮ ಮಳೆಯಾಗದೆ ಇರುವುದರಿಂದ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಮಳೆಯ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. 700 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ಅಂತರ್ಜಲ ಬತ್ತಿ ಹೋಗಿದೆ.

ಬಾಗೂರು- ನವಿಲೆ ಸುರಂಗ ಹಾದು ಹೋಗಿರುವುದರಿಂದ ಸುತ್ತಲಿನ ಪ್ರದೇಶಲ್ಲಿ ಅಂತರ್ಜಲ ಕಡಿಮೆಯಾಗಿ ತೆಂಗು. ರಾಗಿ ಬೆಳೆಗೆ ಹಾನಿಯಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶ್ರೀರಾಮದೇವರ ನಾಲೆ, ಹೇಮಾವತಿ ನಾಲೆಯ ನೀರು ಬಳಸಿ ಕಬ್ಬು, ಬತ್ತ, ತೆಂಗು ಬೆಳೆಯಲಾಗುತ್ತಿದೆ. ಕಡಿಮೆ  ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಜಲಾಶಯದಲ್ಲಿ ಕಡಿಮೆ ನೀರು ಇರುವುದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಮನವಿ ಸಲ್ಲಿಸಿದರು.

ಹೇಮಾವತಿ ಜಲಾಶಯ: ಜಾಗರಣೆ ಇಂದು
ಹಾಸನ:
ಹೇಮಾವತಿ ಜಲಾಶಯದಿಂದ ನೀರು ಬಿಡುವುದನ್ನು ಸ್ಥಗಿತಗೊಳಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿರುವ ಜೆಡಿಎಸ್ ಮುಖಂಡರು ಭಾನುವಾರ ರಾತ್ರಿ ಗೊರೂರಿನ ಹೇಮಾವತಿ ಜಲಾಶಯದ ಸಮೀಪದಲ್ಲೇ ಜಾಗರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಮುಂದಿನಿಂದ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬರಲಾಗುವುದು. ಅಲ್ಲಿಯೇ ಊಟ-ತಿಂಡಿ ಮಾಡಿ ಸಂಜೆಯವರೆಗೆ ಪ್ರತಿಭಟನೆ ಮಾಡುತ್ತೇವೆ. ಸಂಜೆ ಗೊರೂರಿಗೆ ತೆರಳಿ ಜಲಾಶಯದ ಮುಂದೆ ಜಾಗರಣೆ ನಡೆಸುತ್ತೇವೆ. ರೇವಣ್ಣ ಸೇರಿದಂತೆ ಎಲ್ಲ ಶಾಸಕರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.