ADVERTISEMENT

ರೈತರಿಂದ ಅಹವಾಲು ಸ್ವೀಕಾರ

ತೆಂಗು ಬೆಳೆಗೆ ಸುಳಿ ರೋಗ: ಚನ್ನರಾಯಪಟ್ಟಣ ತಾಲ್ಲೂಕಿಗೆ ದೇವೇಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 9:07 IST
Last Updated 5 ಜುಲೈ 2013, 9:07 IST

ಚನ್ನರಾಯಪಟ್ಟಣ: ತೆಂಗು ಬೆಳೆಗೆ ಸುಳಿ ರೋಗ ತಗುಲಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗುರುವಾರ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗೂಳಿಹೊನ್ನೇನಹಳ್ಳಿ, ಮಟ್ಟನವಿಲೆ, ಮರಿಶೆಟ್ಟಿಹಳ್ಳಿ, ಬೂಕನಬೆಟ್ಟದ ಗೇಟ್, ತಿಮ್ಮಲಾಪುರ, ಗೌಡಗೆರೆ, ಬಾಳಗಂಚಿ, ಹೊನ್ನಶೆಟ್ಟಿಹಳ್ಳಿ, ಮುದಿಬೆಟ್ಟಕಾವಲು, ಉಳ್ಳಾವಳ್ಳಿ, ನರೀಹಳ್ಳಿ, ದಿಡಗ, ಸೋಸಲಗೆರೆ, ಅಕ್ಕನಹಳ್ಳಿ ಕ್ರಾಸ್. ಹೀಗೆ ಅನೇಕ ಪ್ರದೇಶದಲ್ಲಿ ಮಳೆ ಕೊರತೆಯಿಂದ ಸೊರಗಿರುವ ತೆಂಗಿನ ಬೆಳೆ ವೀಕ್ಷಿಸಿದರು.

ವಾರ್ತಾ ಇಲಾಖೆ ವಾಹನದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ರೈತರಿಂದ ಅಹವಾಲು ಸ್ವೀಕರಿಸಿದರು. ಖುದ್ದು ತೆಂಗಿನ ತೋಟಕ್ಕೆ ತೆರಳಿ ತೆಂಗು ಬೆಳೆಗೆ ತಗುಲಿರುವ ರೋಗದ ಬಗ್ಗೆ ಮರುಗಿದರು.

ಮರಿಶೆಟ್ಟಿಹಳ್ಳಿ ಗ್ರಾಮದಲ್ಲಿ ತೆಂಗಿನ ಕಾಯಿಯನ್ನು ಹಿಡಿದುಕೊಂಡು ಅದರ ಇಳುವರಿ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ನೋಡಿ ಎಂದು ಮಾಧ್ಯಮದವರತ್ತ ತೋರಿಸಿದರು. ಕೆಲವೆಡೆ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರೆ ಮತ್ತೆ ಕೆಲವೆಡೆ ಜನತೆ ಜಯಘೋಷ ಮೊಳಗಿಸಿ, ಹೂವಿನ ಹಾರ ಹಾಕಿದರು. ಇದು ಚುನಾವಣಾ ಸಮಯವಲ್ಲ. ಹಾರ ಹಾಕುವುದು. ಘೋಷಣೆ ಕೂಗುವುದು ಬೇಡ ಎಂದು ಗೌಡರು ಜನತೆಗೆ ತಿಳಿ ಹೇಳಿದರು.

`ಮಳೆ ಇಲ್ಲದೇ ತೆಂಗು ಬೆಳೆ ಹಾಳಾಗಿದೆ. ಕಲ್ಪವೃಕ್ಷ ಎನಿಸಿಕೊಂಡ ತೆಂಗು ಬೆಳೆಯಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ, ಎಲ್ಲೆಡೆ ಮಳೆ ಬರುತ್ತಿದ್ದರೆ ಈ ಭಾಗದಲ್ಲಿ  ಮಳೆ ಬಿದ್ದಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. 700 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಇನ್ನು ಕೆಲ ದಿನಗಳಲ್ಲಿ ರೈತರು ಗುಳೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ' ಎಂದು ರೈತರು ಅಳಲು ತೋಡಿಕೊಂಡರು.

ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಗೌಡರು, ಕೇಂದ್ರ, ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಮಂತ್ರಿಗಳಿದ್ದಾರೆ. 17 ಬಿಜೆಪಿ ಸಂಸದರಿದ್ದಾರೆ.

ಇವರು ರೈತರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಹಾನಿಯಾಗಿರುವ ಒಂದು ತೆಂಗಿನ ಮರಕ್ಕೆ ತಲಾ 500 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಅದನ್ನು ಕರ್ನಾಟಕದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ತೆಂಗು ಬೆಳೆಗೆ ಹೆಚ್ಚು ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಸರ್ಕಾರ ಪರಿಹಾರ ನೀಡದಿದ್ದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚನ್ನರಾಯಪಟ್ಟಣ, ಅರಸೀಕೆರೆ ತಾಲ್ಲೂಕಿನಲ್ಲಿ ಶೇ 90ರಷ್ಟು ತೆಂಗು ಬೆಳೆ ಹಾಳಾಗಿದೆ. ಇನ್ನೊಂದು ವಾರದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹಳ್ಳಿಗಳಿಗೆ ಕಳುಹಿಸಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಪರಿಹಾರ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು  ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಉಪವಿಭಾಗಾಧಿಕಾರಿ ಕೆ.ಎಚ್. ಜಗದೀಶ್, ತಹಶಿಲ್ದಾರ್ ಪಿ.ಜಿ. ನಟರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಶಿವರಾಜು, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಕೀಲ್ ಅಹಮದ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್‌ಕುಂಟೆ, ಎಪಿಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಜೆಡಿಎಸ್ ಅಧ್ಯಕ್ಷ ಪರಮದೇವರಾಜೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.