ADVERTISEMENT

ಲಕ್ಷ್ಮಿವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 9:16 IST
Last Updated 6 ಜುಲೈ 2017, 9:16 IST
ಅರಸೀಕೆರೆ ತಾಲ್ಲೂಕಿನ ಅಮರಗಿರಿ ಮಾಲೇಕಲ್‌ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು
ಅರಸೀಕೆರೆ ತಾಲ್ಲೂಕಿನ ಅಮರಗಿರಿ ಮಾಲೇಕಲ್‌ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು   

ಅರಸೀಕೆರೆ: ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳ ಅಮರಗಿರಿ ಮಾಲೇಕಲ್ ತಿರುಪತಿ ಲಕ್ಷ್ಮಿವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ–ಭಕ್ತಿಯಿಂದ ಬುಧವಾರ ಜರುಗಿತು.

ಎತ್ತ ನೋಡಿದರೂ ಜನವೋ ಜನ, ರಥದ ಕಳಶಕ್ಕೆ ತೂರಿ ಬರುತ್ತಿದ್ದ ಬಾಳೆಹಣ್ಣು, ಉತ್ತತ್ತಿ, ದೇವಾಲಯದ ಒಳಗಿನಿಂದ ನಿರಂತರವಾಗಿ ಮೊಳಗುತ್ತಿದ್ದ ಘಂಟೆ, ಜಾಗಟೆಗಳ ನಿನಾದ ಸಂಭ್ರಮದ ವಾತಾವರಣ ಸೃಷ್ಟಿಸಿತ್ತು. ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ದೇವಾಲಯದ ಒಳಗೆ ತೆರಳಿ ಹಣ್ಣು–ತುಪ್ಪ ನೈವೇದ್ಯ ಸಲ್ಲಿಸಿದರು.

ಚಿನ್ನಾಭರಣಗಳಿಂದ ಅಲಂಕೃತ ಲಕ್ಷ್ಮಿವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಂಗಲ ವಾದ್ಯಗಳೊಂದಿಗೆ ದೇವಾಲಯದ ಮುಂಭಾಗದಲ್ಲಿರುವ ರಥಮಂಟಪಕ್ಕೆ ಕರೆದೊಯ್ಯಲಾಯಿತು. ಬಣ್ಣಬಣ್ಣದ ಬಟ್ಟೆ, ಬಾವುಟ, ದೊಡ್ಡ ಹೂವಿನ ಹಾರಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ADVERTISEMENT

ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ತಾ.ಪಂ. ಅಧ್ಯಕ್ಷೆ ಮಂಜುಳಾಬಾಯಿ, ತಹಶೀಲ್ದಾರ್‌ ಎನ್‌.ವಿ.ನಟೇಶ್‌, ಕರವೇ ರಾಜ್ಯ ಘಟಕ ಅಧ್ಯಕ್ಷ ಟಿ.ಎ.ನಾರಾಯಣಗೌಡ, ದೇವಾಲಯ ಸಮಿತಿ ಅಧ್ಯಕ್ಷ ಟಿ.ಆರ್‌.ನಾಗರಾಜ್‌ ರಥಕ್ಕೆ ಪೂಜೆ ಸಲ್ಲಿಸಿ, ಗಾಲಿಗಳಿಗೆ ತೆಂಗಿನಕಾಯಿ ಒಡೆಸಿ, ಮಹಾಮಂಗಳಾರತಿ ಸಲ್ಲಿಸಿದರು.

ನೆರೆದಿದ್ದ ಭಕ್ತರು ರಥದ ಹಗ್ಗ ಹಿಡಿದು, ‘ಗೋವಿಂದಾ... ಗೋವಿಂದಾ’ ಎಂಬ ಜಯಘೋಷ ಹಾಕುತ್ತ ರಥ ಎಳೆದರು. ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್‌, ಮಾಜಿ ಶಾಸಕ ಎ.ಎಸ್‌.ಬಸವರಾಜ್‌, ದೇವಾಲಯ ಸಮಿತಿ ಸದಸ್ಯರಾದ ಎನ್‌.ಸಿ.ಗೋವಿಂದರಾಜ್‌, ಎಸ್‌.ವಿ.ಟಿ.ಬಾಬು, ತಿರುಪತಿ ಚಂದ್ರು, ಪರಮಶಿವಯ್ಯ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ವಿ.ಟಿ. ಬಸವರಾಜ್‌, ನಗರ ಘಟಕದ ಅಧ್ಯಕ್ಷ ಮನೋಜ್‌ಕುಮಾರ್‌, ಜಿ.ಪಂ. ಮಾಜಿ ಅಧ್ಯಕ್ಷ ಗೀಜೀಹಳ್ಳಿ ಗುರುಸಿದ್ಧಪ್ಪ ಇದ್ದರು.

ಅನ್ನ ದಾಸೋಹ ವ್ಯವಸ್ಥೆ: ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಬ್ರಾಹ್ಮಣ ಸಮಾಜ, ಆರ್ಯವೈಶ್ಯ ಮಂಡಳಿ, ದೇವಾಂಗ ಸಮಾಜ, ಯಾದವ ಸಮಾಜದವರು ಊಟದ ವ್ಯವಸ್ಥೆ ಮಾಡಿದ್ದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರಸೀಕೆರೆ ಘಟಕದಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಿತ್ತು. ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.