ADVERTISEMENT

ವಿದ್ಯಾರ್ಥಿಗಳ ಪ್ರತಿಭೆಗೆ ಕನ್ನಡಿ

ಜಾನೆಕೆರೆ ಆರ್‌.ಪರಮೇಶ್‌
Published 21 ಡಿಸೆಂಬರ್ 2013, 8:57 IST
Last Updated 21 ಡಿಸೆಂಬರ್ 2013, 8:57 IST
ಆಲೂಗೆಡ್ಡೆ ಹಾಗೂ ಕುಂಬಳಕಾಯಿಯಿಂದ  ಮಾಡಿರುವ ಹೂವಿನ ಗೊಂಚಲು.
ಆಲೂಗೆಡ್ಡೆ ಹಾಗೂ ಕುಂಬಳಕಾಯಿಯಿಂದ ಮಾಡಿರುವ ಹೂವಿನ ಗೊಂಚಲು.   

ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆಯ ವಿವೇಕಾ ಕಾನ್ವೆಂಟ್‌ ಹಾಗೂ ಪ್ರೌಢಶಾಲೆ ವತಿಯಿಂದ ಶೈಕ್ಷಣಿಕ ಪ್ರಗತಿಗಾಗಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ, ಕರಕುಶಲ, ಕೃಷಿ ವಸ್ತುಪ್ರದರ್ಶನ ಜನಮನ ಸೂರೆಗೊಂಡಿತು.

ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಲು ವಸ್ತು ಪ್ರದರ್ಶನ ವೇದಿಕೆ ಆಗಿತ್ತು. ವಿದ್ಯುತ್‌ ತಯಾರಿಕಾ ಮಾದರಿ ಉಪಕರಣಗಳು, ವಿದ್ಯುತ್‌ ಶಕ್ತಿಯ ಉಳಿತಾಯ, ರಾಕೇಟ್‌, ಉಪಗ್ರಹ, ಸೌರವ್ಯೂವ ಮಾದರಿ, ಆಂತರಿಕ್ಷ ನೌಕೆ, ಟೆಲಿಸ್ಕೋಪ್‌ ಮತ್ತು ಬಹುರೂಪ ದರ್ಶಕಗಳು, ಗಣಿತದ ಬಹುರೂಪ ಆಕೃತಿಗಳು, ಕೃಷಿ ತಂತ್ರಜ್ಞಾನ ಉಪಕರಣಗಳು, ಪರಿಸರ ಮಾಲಿನ್ಯ ನಿಣಯಂತ್ರಣ, ಟ್ರಾಫಿಕ್‌ ಹಾಗೂ ರೈಲ್ವೆ ಸಿಗ್ನಲ್ ಗಳು, ಕೆಮಿಕಲ್ಸ್‌ಗಳಿಂದ ಉಂಟಾಗುವ ಪರಿಣಾಮಗಳ ಮಾದರಿಗಳು ಸಾಮಾನ್ಯ ಜನರಿಗೂ ತಿಳುವಳಿಕೆ ನೀಡುವಂತೆ ಅರ್ಥಪೂರ್ಣವಾಗಿದ್ದವು.

ಸ್ಥಳೀಯ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕಾಳು ಮೆಣಸು, ಭತ್ತದ ಬೆಳೆ ಹಾಗೂ ಅವುಗಳ ಕೃಷಿಗೆ ಬಳಸುವ ನೇಗಿಲು ಹಾಗೂ ಯಂತ್ರೋಪಕರಣಗಳ ಮಾದರಿಗಳು ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಇರುವ ಕಾಳಜಿಗೆ ಹಿಡಿದ ಕನ್ನಡಿಯಾಗಿತ್ತು.

ತರಕಾರಿಗಳಿಂದ ಮಾಡಿದ್ದ ಹೂವಿನ ಗೊಂಚಲು, ಸೊರೇಕಾಯಿಯಿಂದ ತಯಾರಿಸಿದ್ದ ಅಕ್ವೇರಿಯಂ, ತೆಂಗಿನಕಾಯಿಂದ ಮಾಡಿದ್ದ ಕೋತಿ, ಗಾಜಿನ ಬಾಟೆಲ್‌ಗಳಿಂದ ಮಾಡಿದ್ದ ಮಂಟಪ, ಥರ್ಮಕೂಲ್‌ನಿಂದ ಮಾಡಿದ್ದ ಶಾಲೆಯ ಮಾದರಿಗಳು ನೋಡುಗರ ಗಮನ ಸೆಳೆದವು.

ಕೊಳ್ಳಿದೆವ್ವ ಒಂದು ಮೂಡ ನಂಬಿಕೆಯಾಗಿದ್ದು, ರಾಸಾಯನಿಕ ವಸ್ತುಗಳಿಂದ ಇಂತಹ ಒಂದು ಕ್ರಿಯೆ ಉಂಟಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಮಾದರಿಗಳ ಮೂಲಕ ಪ್ರದರ್ಶಿಸಿದರು. ವಿದ್ಯಾರ್ಥಿಗಳ ವಸ್ತುಪ್ರದರ್ಶನವನ್ನು ವೀಕ್ಷಣೆ ಮಾಡುವುದಕ್ಕೆ ಬಾಳ್ಳುಪೇಟೆ ಹಾಗೂ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಂದಿದ್ದರು.

ತಾಲ್ಲೂಕಿನ ಇತರ ಶಾಲೆಗಳ ವಿದ್ಯಾರ್ಥಿಗಳ ಪ್ರದರ್ಶನಕ್ಕಾಗಿ ಶನಿವಾರ ಕೂಟ ವಸ್ತುಪ್ರದರ್ಶನವನ್ನು ಮುಂದುವರೆಸುವುದಾಗಿ ಮುಖ್ಯ ಶಿಕ್ಷಕ ವೈ.ಜೆ. ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ಹೇಳಿದರು.

2006– 07 ನೇ ಸಾಲಿನಲ್ಲಿ ಪ್ರಾರಂಭವಾದ ಈ ಶಾಲೆಯ ಪ್ರೌಢಶಾಲೆಯಲ್ಲಿ ಇದುವರೆಗೂ ಹತ್ತನೇ ತರಗತಿಯಲ್ಲಿ ಶೇ.100 ಫಲಿತಾಂಶ ಪಡೆದಿರುವುದು ಮಾತ್ರವಲ್ಲದೆ, ಸತತ ಮೂರು ವರ್ಷದಿಂದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಗೌರವ ಈ ಶಾಲೆಗೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.