ಅರಸೀಕೆರೆ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಗಳ ಅಕ್ರಮ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವೇತನ ಪಡೆಯುತ್ತಿದ್ದ ಬಹಳಷ್ಟು ಮಂದಿ ಮಾಸಿಕ ವೇತನವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ.ಪ್ರಸ್ತುತ ಸೌಲಭ್ಯ ಪಡೆಯುತ್ತಿರುವವ ಜನರು ಅದಕ್ಕೆ ಅರ್ಹರೇ, ಫಲಾನುಭವಿ ಜೀವಂತವಾಗಿದ್ದಾನೆಯೇ, ಒಬ್ಬರೇ ಹಲವು ವೇತನ ಪಡೆಯುತ್ತಿದ್ದಾರಾ? ಎಂಬ ಮಾಹಿತಿ ಸಂಗ್ರಹಿಸಲಗುತ್ತಿದೆ. ಪಟ್ಟಣದಲ್ಲಿ ರೀತಿಯ ಅಕ್ರಮ ಪತ್ತೆ ಹಚ್ಚುವ ವರೆಗೂ ಎಲ್ಲ ವೇತನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಸಂಬಂಧ ಸರ್ಕಾರ ಆದೇಶ ಸಹ ಹೊರಡಿಸಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ, ವಿಧವಾ, ಅಂಗವಿಕಲ ಹಾಗೂ ಸಂಧ್ಯಾ ಸುರಕ್ಷಾ ವೇತನಗಳನ್ನು ಕೆಲವರು ಒಂದಕ್ಕಿಂತ ಹೆಚ್ಚು ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅರಸೀಕೆರೆ ತಾಲ್ಲೂಕಿನಲ್ಲಿ 33 ಸಾವಿರ ಮಂದಿ ಸರ್ಕಾರದ ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಪಡೆಯುವ ಫಲಾನುಭವಿಗಳಿದ್ದಾರೆ. ಅವರೆಲ್ಲರ ಮಾಹಿತಿ ಖಚಿತ ಪಡಿಸಿಕೊಳ್ಳಲಾಗುತ್ತಿದೆ.
2006-2007ನೇ ಸಾಲಿನಲ್ಲಿ ಕರ್ನಾಟಕದಲ್ಲಿ 16,48,420 ಫಲಾನುಭವಿಗಳಿದ್ದರು. ಮೂರು ವರ್ಷಗಳಲ್ಲಿ ವೇತನ ಪಡೆಯುವರ ಸಂಖ್ಯೆ 39,75,128 ಆಗಿದೆ ಎಂದು ಕಂದಾಯ ಇಲಾಖೆಯ ಸುತ್ತೋಲೆ ತಿಳಿಸುತ್ತದೆ. ಇಂತಹ ಬೆಳವಣಿಗೆಯಿಂದ ಎಲ್ಲ ಫಲಾನುಭವಿಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಅನರ್ಹರ ವೇತನ ರದ್ದು ಮಾಡಲಾಗುತ್ತದೆ. ಆದರೆ ಸರ್ಕಾರ ನೀಡುತ್ತಿದ್ದ ವೇತನ ನಂಬಿಕೊಂಡು ಜೀವನ ನಡೆಸುತ್ತಿದ್ದ ಅನೇಕರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿತ್ಯದ ತಿಂಡಿ - ಊಟಕ್ಕೂ ತೊಂದರೆ ಅನುಭವಿಸುತ್ತಿದ್ದೇವೆ ಗ್ರಾಮೀಣ ಭಾಗದ ಹಲವು ಫಲಾನುಭವಿಗಳು ನೋವು ವ್ಯಕ್ತಪಡಿಸುತ್ತಾರೆ.
ವೃದ್ಧರ ಔಷಧಿ, ಮಾತ್ರೆಗೆ ಕಾಸು ಇಲ್ಲ, ಮುಂದೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಎಷ್ಟು ದಿನದೊಳಗೆ ಈ ಕಾರ್ಯ ಮುಗಿಸುತ್ತಯೋ, ಯಾರೋ ಮಾಡುವ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡಲಾಗುತ್ತಿದೆ ಎಂದು ಕೆಲವರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.