ADVERTISEMENT

ಶೀಘ್ರದಲ್ಲೇ ಕ್ರಾಂತಿಕಾರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:35 IST
Last Updated 3 ಫೆಬ್ರುವರಿ 2011, 8:35 IST

ಹಾಸನ: ‘ರಾಜ್ಯದ ವಿವಿಧ ಭಾಗಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಆಗುತ್ತಿರುವ ಬೆಳೆ ಹಾನಿ ಹಾಗೂ ಪ್ರಾಣ ಹಾನಿಗೆ ಪರಿಹಾರ ನೀಡುವು ದಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿಯೇ ಕ್ರಾಂತಿಕಾರಿ ಯೋಜ ನೆಯೊಂದನ್ನು ಘೋಷಿಸಲಾಗುವುದು’ ಎಂದು ಅರಣ್ಯ ಸಚಿವ ವಿಜಯಶಂಕರ್ ತಿಳಿಸಿದರು.

ಬುಧವಾರ ಇಲ್ಲಿನ ಅರಣ್ಯಭವನದಲ್ಲಿ ಇಲಾಖೆಯ ಅಭಿವೃದ್ಧಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ರಾಂತಿಕಾರಿ ಯೋಜನೆ ಸಿದ್ಧವಾಗಿದೆ. ಅದರೆ ಅಧಿಕೃತವಾಗಿ ಘೋಷಣೆಯಾಗುವವರೆಗೂ ಯೋಜನೆಯ ವಿವರ ನೀಡಲಾಗುವುದಿಲ್ಲ ಎಂದರು.

ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶದಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ನಿಷೇಧಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಹಿಂದೆ ಅರಣ್ಯ ಬೆಳೆಸುವ ಉದ್ದೇಶದಿಂದ ಈ ಗಿಡಗಳನ್ನು ಬೆಳೆಸಲಾಗಿತ್ತು. ಆದರೆ ಅವು ಈ ವಾತಾವರಣಕ್ಕೆ ಹೊಂದಿಕೆಯಾಗುವ ಮರಗಳಲ್ಲ. ಹಂತಹಂತವಾಗಿ ಇವುಗಳನ್ನು ನಾಶಮಾಡಿ ಅದರ ಬದಲಿಗೆ ಸ್ಥಳೀಯ ಮತ್ತು ಪಾರಂಪರಿಕ ಗಿಡಗಳನ್ನು ಬೆಳೆಸಲು ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

‘ಅರಣ್ಯ ಇಲಾಖೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಪ್ರಾದೇಶಿಕ ಅರಣ್ಯ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಇನ್ನು 10 - 15 ದಿನಗಳಲ್ಲಿ ಕರಡು ಸಿದ್ಧವಾಗಲಿದೆ. ಯಾವ ಪ್ರದೇಶದಲ್ಲಿ ಎಂಥ ಗಿಡಗಳನ್ನು ಬೆಳೆಸಬೇಕು ಎಂಬ ವಿಚಾರದಿಂದ ಆರಂಭಿಸಿ ಇಲಾಖೆಗೆ ಸಿಬ್ಬಂದಿ ನೇಮಕದವರೆಗೆ ಎಲ್ಲ ವಿಚಾರಗಳನ್ನೂ ಇದರಲ್ಲಿ ಅಳವಡಿಸಲಾಗಿದೆ. ಕರಡು ಸಿದ್ಧಗೊಂಡ ಬಳಿಕ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗುವುದು. ಬಳಿಕ ಅದಕ್ಕೆ ಅಂತಿಮ ರೂಪ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಉಂಟಾಗುತ್ತಿರುವ ಕಾಡಾನೆಗಳ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ‘ಜಿಲ್ಲೆಯಲ್ಲಿ ಸುಮಾರು 200 ರಿಂದ 300  ಎಕರೆ ಕಾಡನ್ನು ಗುರುತಿಸಿ ಅಲ್ಲ ಆನೆಗಳಿಗೆ ತರಬೇತಿ ಕೇಂದ್ರ ಆರಂಭಿಸುವ ಮತ್ತು ತರಬೇತಿ ಪಡೆದ ಆನೆಗಳನ್ನು ಇಲಾಖೆಯ ಕೆಲಸಗಳಿಗಾಗಿ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಬೇರೆ ಬೇರೆ ರಾಜ್ಯಗಳಿಂದಲೂ ಆನೆಗಳಿಗೆ ಬೇಡಿಕೆ ಬಂದಿದೆ. ಜತೆಗೆ ದಸರಾ ಆನೆಗಳಿಗೂ ವಯಸ್ಸಾಗುತ್ತ ಬಂದಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.