ADVERTISEMENT

ಸಬ್ಬನಹಳ್ಳಿ: ಜ್ವರ ಪೀಡಿತರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಿಶೇಷ
Published 10 ಜೂನ್ 2013, 6:42 IST
Last Updated 10 ಜೂನ್ 2013, 6:42 IST

ಹಿರೀಸಾವೆ: ಹೋಬಳಿಯ ಸಬ್ಬನಹಳ್ಳಿ ಗ್ರಾಮದ ಕೆಲವರು ಜ್ವರದಿಂದ ಬಳಲುತ್ತಿದ್ದು, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಮನೆಮಾಡಿದೆ.
ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ 120 ಮನೆಗಳಿದ್ದು, 600 ಜನಸಂಖ್ಯೆ ಇದೆ. ಗ್ರಾಮದ ಹಲವರು ಜ್ವರದಿಂದ ಬಳಲುತ್ತಿದ್ದಾರೆ.

ಒಂದು ತಿಂಗಳ ಹಿಂದೆ ಬೋರೇಗೌಡ ಎಂಬವರಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿನ ವೈದ್ಯಕೀಯ ಪರೀಕ್ಷೆಯಿಂದ ಡೆಂಗೆ ಇರುವುದು ದೃಢಪಟ್ಟಿತ್ತು. ಹಲವು ದಿನ ಚಿಕಿತ್ಸೆ ಪಡೆದ ಅವರು ಗ್ರಾಮಕ್ಕೆ ಮರಳಿದ್ದಾರೆ. ಗ್ರಾಮದ ಕೃಷ್ಣಮೂರ್ತಿ, ಗಾಯತ್ರಿ, ಲತಾ, ದೇವರಾಜೇ ಗೌಡ, ಶಂಕರೇಗೌಡ ಮತ್ತು ಮನೋಹರ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಇವರೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೆ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ರಂಗದಬೀದಿಯ ಜನರಿಗೆ ಮೊದಲು ಜ್ವರ ಕಾಣಿಸಿಕೊಂಡು, ಈಗ ಎಲ್ಲ ಬೀದಿಗಳಿಗೆ ವ್ಯಾಪಿಸಿದೆ.

ನಿತ್ಯ ಕನಿಷ್ಠ ನಾಲ್ಕು ಜನರಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಜುಟ್ಟನಹಳ್ಳಿ ಮತ್ತು ಹಿರೀಸಾವೆ ಆರೋಗ್ಯ ಕೇಂದ್ರಗಳಲ್ಲಿ ಕೆಲ ಜನ ಚಿಕಿತ್ಸೆ ಪಡೆದು ಗುಣಮುಖರಾದರೆ, ಗುಣಮುಖರಾದವರು ಹೆಚ್ಚಿನ ಚಿಕಿತ್ಸೆಗೆ ಚನ್ನರಾಯಪಟ್ಟಣ, ಹಾಸನ, ಮೈಸೂರು, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.

`ಗ್ರಾಮದ ಯಾವುದೇ ಚರಂಡಿಗಳು ಶುಚಿಯಾಗಿಲ್ಲ. ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮದ ಜ್ವರ ಪೀಡಿತರದಲ್ಲಿ `ಫ್ಲೈವಿ ವೈರಾಣು' ಕಾಣಿಸಿಕೊಂಡಿದೆ. ಇಲ್ಲಿನ ಕುಡಿಯುವ ನೀರನ್ನು ಪರೀಕ್ಷಿಸಲಾಗಿದ್ದು, ವೈರಾಣುಗಳು ಕಂಡುಬಂದಿಲ್ಲ. ಆರೋಗ್ಯ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಜ್ವರದ ಮಾಹಿತಿ ಸಂಗ್ರಹಿ ಸಿದ್ದಾರೆ. ಸೂಕ್ತ ಮಾರ್ಗದರ್ಶನ ಸಹ ನೀಡಲಾಗಿದೆ' ಎಂದು ಜುಟ್ಟನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶ್ರೀನಿವಾಸ್ `ಪ್ರಜಾವಾಣಿ'ಗೆ ತಿಳಿಸಿದರು.

`ಜ್ವರ ಕಾಣಿಸಿಕೊಂಡರೆ ಜನ ಡೆಂಗೆ ಎಂದು ಭಯಪಡುತ್ತಿದ್ದಾರೆ. ಇದರಿಂದ ರಕ್ತಕಣಗಳ ಸಂಖ್ಯೆ ಕಡಿಮೆಯಾಗಿ, ಕಾರ್ಡ್ ಟೆಸ್ಟ್‌ನಲ್ಲಿ `ಎನ್‌ಎಸ್‌ಎಜಿ ಪಾಸಿಟಿವ್' ಫಲಿತಾಂಶ ಬರುತ್ತದೆ. ಇದನ್ನೇ ಡೆಂಗೆ ಎಂದು ಹೇಳಲಾಗದು. ಜ್ವರ ಕಾಣಿಸಿಕೊಂಡವರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು' ಎಂದು ಹಿರೀಸಾವೆ ಆಸ್ಪತ್ರೆ ವೈದ್ಯ ವೈಶಾಖ್ ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.