ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಸಿದ್ದಾಪುರ

ಎಂ.ಆರ್.ಬಾಬು
Published 1 ಅಕ್ಟೋಬರ್ 2014, 6:26 IST
Last Updated 1 ಅಕ್ಟೋಬರ್ 2014, 6:26 IST

ರಾಮನಾಥಪುರ: ಹಳ್ಳಿಗಳ ಉದ್ಧಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಆ ಸೌಲಭ್ಯಗಳು ಜನಸಾಮನ್ಯರಿಗೆ  ಲಭಿಸುವುದಿಲ್ಲ. ಹತ್ತಾರು ಯೋಜನೆಗಳಿದ್ದರೂ ಎಷ್ಟೋ ಹಳ್ಳಿಗಳಲ್ಲಿ ಮೂಲ ಸೌಲಭ್ಯವಿಲ್ಲದೆ ಅವು ಕುಗ್ರಾಮಗಳಾಗಿ ಉಳಿದಿವೆ. ಸಮೀಪದ ಕೊಣನೂರು ಹೋಬಳಿ ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಇದಕ್ಕೆ ನಿದರ್ಶನ.

ಗ್ರಾಮದಲ್ಲಿ ಸುಮಾರು 800 ಮನೆಗಳಿವೆ. 3,200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿ ಇನ್ನಾವುದೇ ಸೌಲಭ್ಯ ಕಲ್ಪಿಸಲಾಗಿಲ್ಲ. 

ಗ್ರಾಮದ ಬಹುತೇಕ ಬೀದಿಗಳಲ್ಲಿ ಚರಂಡಿಗಳಿಲ್ಲ. ಕೆಲವು ಕಡೆ ಚರಂಡಿ ಇದ್ದರೂ ಅದರಲ್ಲಿ ಕುರುಚುಲು ಗಿಡಗಳು ಬೆಳೆದಿವೆ. ಇದರಿಂದಾಗಿ ನೀರು ಹರಿಯದೇ ಕೊಳಚೆ ನಿರ್ಮಾಣವಾಗಿದೆ. ಗ್ರಾಮದಲ್ಲಿ ಜನರು ಮಲೇರಿಯಾ, ಡೆಂಗೆ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದ್ದು ತಿರುಗಾಡುವ ರಸ್ತೆ ಕೆಸರುಮಯವಾಗಿದೆ.

ಶೌಚಾಲಯದ ಸಮಸ್ಯೆ: ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಪಂಚಾಯಿತಿಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದರೂ ಇಲ್ಲಿನ ಬಹುತೇಕ ಮನೆಯವರು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ. ಸ್ಥಳೀಯ ಪಂಚಾಯಿತಿಯವರು ಗ್ರಾಮಕ್ಕೆ  5ರಿಂದ 10 ಶೌಚಾಲಯ ಮಾತ್ರ ನೀಡಿದ್ದಾರೆ.

ಡಾಂಬರು ಕಾಣದ ರಸ್ತೆ: ಹತ್ತು ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಇಲ್ಲಿನ ರಸ್ತೆಗಳಿಗೆ ಡಾಂಬರ್ ಹಾಕಿದ್ದನ್ನು ಬಿಟ್ಟರೆ ಅನಂತರ ಈವರೆಗೆ ರಸ್ತೆ ಡಾಂಬರು ಕಂಡಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳು ಮೇಲೆದ್ದಿವೆ. ಕೆಲವು ಕಡೆ ಗುಂಡಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ರಸ್ತೆ ಯಾವಾಗಲೂ ದೂಳಿನಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ವಾಹನ ಸವಾರರ ಪರದಾಟ ಹೇಳತೀರದು. ಶಾಲೆಯ ಮುಂಭಾಗ ಕುಡಿಯುವ ನೀರು ಶೇಖರಣೆ ತೊಟ್ಟಿ ನಿರ್ಮಾಣಕ್ಕೆಂದು ದೊಡ್ಡ ಗುಂಡಿ ತೆಗೆದು 6 ತಿಂಗಳು ಉರುಳಿದ್ದರೂ, ಕಾಮಗಾರಿ ಪೂರ್ಣಗೊಂಡಿಲ್ಲ.

ಶಾಲಾ ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಈ ಗುಂಡಿ ದಾಟಬೇಕು. ಶಾಲೆಯವರಿಗೆ ಮತ್ತು ಪಂಚಾಯಿತಿಯವರಿಗೆ ಈ ಬಗ್ಗೆ  ದೂರು ನೀಡಿದರು ಪ್ರಯೋಜನವಾಗಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.