ADVERTISEMENT

ಸೋಮಾರಿತನ ಹೆಚ್ಚಿಸುವ ‘ಭಾಗ್ಯ’

ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:40 IST
Last Updated 7 ಡಿಸೆಂಬರ್ 2013, 8:40 IST

ಅರಸೀಕೆರೆ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಹೆಸರಿನಲ್ಲಿ ರೂಪಿಸುತ್ತಿರುವ ‘ಭಾಗ್ಯ’ದ ಯೋಜನೆಗಳು ನಮ್ಮನ್ನು ಸೋಮಾರಿ ತನಕ್ಕೆ ತಳ್ಳುತ್ತಿವೆ’ ಎಂದು ತುಮಕೂರು ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದಿಸಿದರು.

ತಾಲ್ಲೂಕಿನ ಗಂಡಸಿ ಗ್ರಾಮದಲ್ಲಿ ಶುಕ್ರವಾರ ನಡೆದ ಶಂಭುಲಿಂಗೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರ ವಿವಿಧ ವರ್ಗಗಳ ಓಲೈಕೆಗಾಗಿ ರೂಪಿಸುವ ಅಗ್ಗದ ಯೋಜನೆಗಳು ಜನರಲ್ಲಿ ಸೋಮಾರಿ ಮನೋಭಾವ ಬೆಳಸಿ ದೇಶದ ಭವಿಷ್ಯವನ್ನೇ ಹಾಳು ಮಾಡುತ್ತಿವೆ’ ಎಂದು ದೂರಿದರು.

‘ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೋಟ್ಯಂತರ ಹಣ ವೆಚ್ಚ ಮಾಡಿದರೂ ಪ್ರಯೋಜನ ಅಗುತ್ತಿಲ್ಲ. ಈ ಹಿಂದೆ ಪಠ್ಯಪುಸ್ತಕಗಳಲ್ಲಿ ದೇಶದ ಅಭಿವೃದ್ಧಿ ಬಗ್ಗೆ ಮತ್ತು ನೆಲ– ಜಲ– ಭಾಷೆ ಅಭಿಮಾನದ ಬಗ್ಗೆ ಅಳವಡಿಸುತ್ತಿದ್ದ ವಿಷಯಗಳು ಈಗ ಇಲ್ಲ. ಇದರಿಂದ ಶಿಕ್ಷಣದ ಮೂಲ ಉದ್ದೇಶವೇ ನಿರರ್ಥಕವಾಗುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಧ್ಯೇಯ ಇಟ್ಟುಕೊಂಡು ಕಳೆದ 50 ವರ್ಷಗಳ ಹಿಂದೆ ಗಂಡಸಿ ಗ್ರಾಮದಲ್ಲಿ ಸ್ಥಾಪಿತವಾದ ಶಂಭುಲಿಂಗೇಶ್ವರ ವಿದ್ಯಾಸಂಸ್ಥೆ ಅನೇಕ ಏಳು– ಬೀಳುವಿನ ನಡುವೆಯೂ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಇಂದು ಪ್ರೌಢಶಾಲೆಯ ಸುವರ್ಣ ಹಾಗೂ ಕಾಲೇಜಿನ ರಜತ ಮಹೋತ್ಸವವನ್ನು ಆಚರಿಸುತ್ತಿರುವುದು ಈ ಭಾಗದ ಜನರಲ್ಲಿ ಸಂತೋಷ ಉಂಟುಮಾಡಿದೆ’ ಎಂದರು.

‘ವಿದ್ಯಾದಾನ ಶ್ರೇಷ್ಠವಾದ ಕೆಲಸ. ಇಂದಿನ ಮಕ್ಕಳು ದೇಶದ ಭವಿಷ್ಯವನ್ನು ಬದಲಾಯಿಸುವ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವ ಆಯುಧಗಳು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ತಿದ್ದಿ, ತೀಡಿ ಉತ್ತಮ ಭವಿಷ್ಯ ರೂಪಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯ ಬೇಕು’ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ನೊಣವಿನಕೆರೆ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಗಂಡಸಿ ಶಂಭುಲಿಂಗೇಶ್ವರ ಮಠದ ರೇವಣ ಸಿದ್ದೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌. ರಾಜಮ್ಮ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ, ಮಾಜಿ ಸದಸ್ಯ ಗಂಗಾಧರ್‌, ಎಪಿಎಂಸಿ ಮಾಜಿ ಸದಸ್ಯ ರಾಮಚಂದ್ರ, ವಿದ್ಯಾಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.