ADVERTISEMENT

ಸ್ವಗ್ರಾಮದಲ್ಲಿ ಪುನರಾರಂಭವಾದ ಶಾಲೆ

ಹಿ.ಕೃ.ಚಂದ್ರು
Published 8 ಜೂನ್ 2013, 10:12 IST
Last Updated 8 ಜೂನ್ 2013, 10:12 IST

ಹಿರೀಸಾವೆ: ಶಿಕ್ಷಣ ಪಡೆಯಲು ಮನೆಯಿಂದ ಒಂದು ಕಿ.ಮೀ. ನಡೆದು ಹೋಗುತ್ತಿದ್ದ ಪುಟ್ಟ ಮಕ್ಕಳು ಈಗ ಸ್ವಗ್ರಾಮದಲ್ಲಿಯೇ ಪುನರಾರಂಭವಾದ ಶಾಲೆಗೆ ಹೋಗುತ್ತಿದ್ದಾರೆ.

ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಮೂರು ವರ್ಷ ಹಿಂದೆ ಮುಚ್ಚಿದ್ದ ಹೋಬಳಿಯ ನರಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮುತುವರ್ಜಿ ವಹಿಸಿ ಮತ್ತೆ ಪ್ರಾರಂಭಿಸಿದ್ದಾರೆ.

2009-10ರಲ್ಲಿ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದರು. ಒಬ್ಬರು ಶಿಕ್ಷಕರು ನಿಧನರಾದ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆ ಕಾರಣ ಹೇಳಿ ಪಾಲಕರು ಮಕ್ಕಳನ್ನು ದಿಡಗದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದರು. ಇದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚಿತ್ತು. ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ವರ್ಗಾವಣೆ ಸಹ ಮಾಡಲಾಗಿತ್ತು. ಆದರೆ, ಈ ಶಾಲೆಯನ್ನು ಪುನಃ ಆರಂಭಿಸಬೇಕು ಎಂಬ ಆಸಕ್ತಿ ಹೊಂದಿದ್ದ ಗ್ರಾಮಸ್ಥರು ಶಾಲೆಯ ದಾಖಲೆಗಳನ್ನು ಸ್ಥಳಾಂತರ ಮಾಡಲು ಅವಕಾಶ ನೀಡಿರಲಿಲ್ಲ. ಈಗ ಮೂರು ವರ್ಷಗಳ ನಂತರ ಶಾಲೆಯನ್ನು ಪುನರಾರಂಭಿಸವಲ್ಲಿ ಯಶಸ್ವಿಯಾಗಿದ್ದಾರೆ.

`ನಾನು ಪ್ರತಿ ನಿತ್ಯ ನಡೆದು ದಿಡಗ ಗ್ರಾಮದ ಶಾಲೆಗೆ ಹೋಗುತ್ತಿದ್ದೆ, ಈ ವರ್ಷ ನಮ್ಮ ಊರಲ್ಲೇ ಶಾಲೆ ಆರಂಭವಾಗಿರುವುದರಿಂದ ಸಂತಸ ತಂದಿದೆ' ಎನ್ನುತ್ತಾಳೆ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಎನ್.ಎಂ. ಭೂಮಿಕಾ.

`ಆರು ತಿಂಗಳಿನಿಂದ ಗ್ರಾಮದ ಮುಖಂಡರೊಂದಿಗೆ ಮನೆ ಮನೆಗೆ ಭೇಟಿ ಮಾಡಿ, ಮಕ್ಕಳನ್ನು ಶಾಲೆಗೆ ಕರೆತರಲಾಗಿದೆ. ಪ್ರಸ್ತುತ 17 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದನೇ ತರಗತಿಗೆ ಮೂವರು ಮಕ್ಕಳು ಸೇರಿದ್ದಾರೆ. ಉಳಿದ ವಿದ್ಯಾರ್ಥಿಗಳ ವರ್ಗಾವಣೆ ಪತ್ರಕ್ಕೆ ಅರ್ಜಿ ಬರೆದು ಪೋಷಕರಿಗೆ ನೀಡಲಾಗಿದೆ. ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ  ಎಚ್.ಕೆ. ಪಾಂಡು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ' ಎಂದು ಶಿಕ್ಷಣ ಸಂಯೋಜಕ ಎಚ್.ಸಿ. ತಮ್ಮಣ್ಣಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ಮೂರು ವರ್ಷದಿಂದ ಶಾಲೆಯನ್ನು ಉಪಯೋಗಿಸದೆ ಇರುವುದರಿಂದ ಕಟ್ಟಡದ ಅಂದ ಹಾಳಾಗಿದೆ. ಶಾಲೆಯ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಬೇಕು. ಒಂದಷ್ಟು ದುರಸ್ತಿ ಕಾರ್ಯ ಆಗಬೇಕಿದೆ. ಹಿಂದಿನ ಅಡುಗೆ ಸಹಾಯಕರೇ ಮಕ್ಕಳಿಗೆ ಆಹಾರ ತಯಾರಿಸುತ್ತಿದ್ದಾರೆ. ಶಾಲೆ ಮುಚ್ಚಿದಾಗ ಶಿಕ್ಷಕರ ಹುದ್ದೆಗಳನ್ನು ರದ್ದು ಪಡಿಸಿರುವುದರಿಂದ ಇಲ್ಲಿ ಶಾಶ್ವತ ಶಿಕ್ಷಕರ ನೇಮಕ ಆಗಿಲ್ಲ, ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಿದರೆ ಶಾಲೆ ಉಳಿಯುತ್ತದೆ. ಜತೆಗೆ ಗ್ರಾಮಸ್ಥರೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ. ಶಿಕ್ಷಕರೇ ಇಲ್ಲದಿದ್ದರೆ ಮಕ್ಕಳನ್ನು ಕಳುಹಿಸಲಾರರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.