ADVERTISEMENT

ಹಕ್ಕು, ಕರ್ತವ್ಯ ಗೌರವಿಸಿ: ನ್ಯಾ.ಸನತ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 5:49 IST
Last Updated 12 ಡಿಸೆಂಬರ್ 2013, 5:49 IST

ಹೊಳೆನರಸೀಪುರ: ಸಂವಿಧಾನ ಮಾನವನಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಅದನ್ನು ಗೌರವಿಸಿ ನಡೆದರೆ ನಮ್ಮ ಜೀವನ ಉತ್ತಮವಾಗಿರುತ್ತದೆ ಎಂದು ನ್ಯಾಯಾಧೀಶ ಸಿ.ವಿ. ಸನತ್‌ ಹೇಳಿದರು.

ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವಹಕ್ಕು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಹಾಗೂ ನಿಯಮಗಳು ಮಾನವ ಹಕ್ಕುಗಳನ್ನು ರಕ್ಷಿಸುತ್ತದೆ ಆದ್ದರಿಂದ ಎಲ್ಲರೂ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಗೌರವಿಸಬೇಕು ಎಂದರು.

ಚನ್ನರಾಯಪಟ್ಟಣ ಮಾನವ ಹಕ್ಕು ಸಮಿತಿ ಸದಸ್ಯೆ ಫಾತಿಮಾ ಭಾನು ಮಾತನಾಡಿ, ಮಹಿಳೆಯರು ಕಾನೂನುಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಿದ್ದರೆ ಅಗತ್ಯ ಸಮಯದಲ್ಲಿ ಅವರನ್ನು ಅವರೇ ರಕ್ಷಿಸಿ ಕೊಳ್ಳಬಹುದು ಎಂದರು.
ತಾಲ್ಲೂಕು ಮಾನವ ಹಕ್ಕು ಸಮಿತಿ ಅಧ್ಯಕ್ಷ ಶಿವೇಗೌಡ, ಕಾರ್ಯದರ್ಶಿ ವಸಂತ ಕುಮಾರ್‌, ಎಪಿಪಿ ಮಲ್ಲಿಕಾರ್ಜುನ್‌ ದೊಡ್ಡಗೌಡರ್‌,  ವಕೀಲರಾದ ಜಯರಾಂ, ಶಿವಮ್ಮ ಹಾಜರಿದ್ದರು.

ಸಮ್ಮೇಳನ: ಸಹಕಾರಕ್ಕೆ ಮನವಿ
ಹೊಳೆನರಸೀಪುರ: ಡಿ. 15ರಂದು ಹಾಸನದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ನಡೆಯಲಿರುವ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತಾಲ್ಲೂಕಿನ ಎಲ್ಲ ಸಾಹಿತಿಗಳು ಬರಹಗಾರರು ಚಿಂತಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್‌.ಟಿ. ಲಕ್ಷ್ಮಣ ಕೋರಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ 3 ಗೋಷ್ಠಿಗಳನ್ನು ನಡೆಸಲಾಗುತ್ತಿದೆ. ದಲಿತ ಸಂಘರ್ಷ ಸಮಿತಿಯ ಎಂ. ಸೋಮಶೇಖರ್‌, ಸಾಹಿತಿ ಕುಮಾರ್‌ ಛಲವಾದಿ, ಎಸ್‌.ಚಿನ್ನಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

15ರಂದು ಸ್ಮರಣೋತ್ಸವ
ಜಾವಗಲ್‌: 12ನೇ ಶತಮಾನದ ಶರಣರ ಬದುಕು, ಬರಹ, ಬೋಧನೆ ಗಳನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಡಿ. 15ರಂದು ಗೇರುಮರ ಗ್ರಾಮದ ಸಮೀಪದ ವಿಶ್ವಗುರು ಬಸವಣ್ಣ, ವೈರಾಗ್ಯ ನಿಧಿ ಅಕ್ಕ ಮಹಾದೇವಿ ವಿರಕ್ತಾಶ್ರಮದಲ್ಲಿ ‘ಕಲ್ಯಾಣ ಶರಣರ ಸ್ಮರಣೋತ್ಸವ’ ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ವಿವಿಧ ಮಠಗಳ ಸ್ವಾಮಿಗಳು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.